ಕ್ರಿಪ್ಟೊ ಕರೆನ್ಸಿ
ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಲ್ಲಿರುವ ಕ್ರಿಪ್ಟೊ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿದ ಸೈಬರ್ ವಂಚಕರು, ₹378 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ದೋಚಿದ್ದಾರೆ.
ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನೆಬಿಲೊ ಟೆಕ್ನಾಲಜೀಸ್ ಕಂಪನಿಯ ಗುತ್ತಿಗೆ ಸಿಬ್ಬಂದಿ ರಾಹುಲ್ ಅಗರ್‌ವಾಲ್ ಅವರನ್ನು ಬಂಧಿಸಲಾಗಿದೆ.
ರಾಹುಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಬಳಸುತ್ತಿದ್ದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹರ್ದೀಪ್ ಸಿಂಗ್ ಅವರು ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್ ಠಾಣೆಯ ಪೊಲೀಸರು ಹೇಳಿದರು.
ಎರಡು ಬಾರಿ ಹ್ಯಾಕ್:
ಕಂಪನಿಯು ಕ್ರಿಪ್ಟೊ ಕರೆನ್ಸಿ ಬದಲಾವಣೆ ಮಾಡುವ ಫ್ಲಾಟ್ ಫಾರಂ ಆಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್ ಹ್ಯಾಕ್ ಮಾಡಿದ್ದಾರೆ. ಜುಲೈ 19ರ ಮುಂಜಾನೆ ಕಂಪನಿಯ ವ್ಯಾಲೆಟ್ ಅನ್ನು ಹ್ಯಾಕ್ ಮಾಡಿದ್ದರು. ಆಗ ವ್ಯಾಲೆಟ್ನಿಂದ ಒಂದು ಯುಎಸ್‌ಡಿಟಿ ಅನ್ನು ಮತ್ತೊಂದು ವ್ಯಾಲೆಟ್ಗೆ ವರ್ಗಾವಣೆ ಮಾಡಿಕೊಂಡಿದ್ದರು. ನಂತರ, ಅಂದೇ ಬೆಳಿಗ್ಗೆ 9.40ರ ಸುಮಾರಿಗೆ ಮತ್ತೆ ಸರ್ವರ್ ಹ್ಯಾಕ್ ಮಾಡಿ, ವ್ಯಾಲೆಟ್ನಿಂದ 44 ಮಿಲಿಯನ್ ಯುಎಸ್‌ಡಿಟಿ (ಅಂದಾಜು ₹378 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ) ಅನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ.
‘ರಾಹುಲ್ ಅವರು ಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಉಳಿದ ಸಮಯದಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕ್ರಿಪ್ಟೊ ಕರೆನ್ಸಿ ಕಂಪನಿ ನೀಡಿದ್ದ ಲ್ಯಾಪ್‌ಟಾಪ್ ಅನ್ನು ಬಳಸಿಕೊಂಡು ರಾಹುಲ್ ಬೇರೆ ಕಂಪನಿಯ ಕೆಲಸವನ್ನೂ ಮಾಡುತ್ತಿದ್ದರು. ರಾಹುಲ್ ಅಗರ್‌ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು ಲ್ಯಾಪ್‌ಟಾಪ್ ಹ್ಯಾಕ್ ಮಾಡಿ ಸರ್ವರ್ಗೆ ಪ್ರವೇಶಿಸಿ ₹378 ಕೋಟಿ ಮೌಲ್ಯದ ಕ್ರಿಪ್ಟೊ ಕರೆನ್ಸಿ ದೋಚಿರುವುದು ಗೊತ್ತಾಗಿದೆ’ ಎಂದು ಸೈಬರ್ ಪೊಲೀಸರು ಹೇಳಿದರು.
ಆಂತರಿಕ ತನಿಖೆ ನಡೆಸಿದ್ದ ಕಂಪನಿ: ಕ್ರಿಪ್ಟೊ ಕರೆನ್ಸಿ ದೋಚಿರುವುದು ಗೊತ್ತಾದ ಬಳಿಕ ಕಂಪನಿಯು ಆಂತರಿಕ ತನಿಖೆ ನಡೆಸಿತ್ತು. ತನಿಖೆ ವೇಳೆ ತನ್ನದೇ ಕಂಪನಿಯ ನೌಕರ ರಾಹುಲ್ ಅಗರ್‌ವಾಲ್ ಅವರ ಲ್ಯಾಪ್ಟ್ಯಾಪ್ ಮೂಲಕ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ದೊಡ್ಡ ಸೈಬರ್ ವಂಚನೆ
‘ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಇದಾಗಿದೆ. ಕಂಪನಿ ಸಿಬ್ಬಂದಿಯ ಲ್ಯಾಪ್‌ಟಾಪ್ ಅನ್ನು ಬಳಸಿಕೊಂಡು ಸೈಬರ್ ವಂಚಕರು ಎಲ್ಲೋ ಕುಳಿತು ವಂಚನೆ ನಡೆಸಿದ್ದಾರೆ. ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನಲ್ಲಿದ್ದ ದತ್ತಾಂಶ ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.