ADVERTISEMENT

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೂರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 16:09 IST
Last Updated 24 ಡಿಸೆಂಬರ್ 2025, 16:09 IST
ವಿಜಯಲಕ್ಷ್ಮೀ
ವಿಜಯಲಕ್ಷ್ಮೀ   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯಲಕ್ಷ್ಮಿ ನೀಡಿದ್ದ ದೂರು ಆಧರಿಸಿ, ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ, ವಿರಾಟ್ ಕಿಚ್ಚ ಎಂಬ ಖಾತೆ ಸೇರಿ 18 ಇನ್‌ಸ್ಟ್ರಾಗ್ರಾಂ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್‌ ಅಜಯ್ ಹಿಲೋರಿ ಅವರನ್ನು ಭೇಟಿಯಾಗಿ ವಿಜಯಲಕ್ಷ್ಮಿ ಚರ್ಚಿಸಿದರು. ಬಳಿಕ ನಗರ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಲ್ಲದೆ, ಅವಹೇಳನಕಾರಿ ಸಂದೇಶಗಳ ಸ್ಕ್ರೀನ್‌ ಶಾಟ್​​ಗಳ ಸಮೇತ ದೂರು ನೀಡಿದ್ದು, ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಮಾಹಿತಿ ನೀಡಿದರು.

ADVERTISEMENT

ದೂರಿನಲ್ಲೇನಿದೆ?: ‘ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಡೆವಿಲ್ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾನು ವೇದಿಕೆಯ ಮೇಲೆ ಪತಿ ದರ್ಶನ್ ಕುರಿತು ಮಾತನಾಡಿದ್ದೆ. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಹಾಗೂ ನಮ್ಮ ಕುಟುಂಬದ ಕುರಿತು ಅಶ್ಲೀಲ ಸಂದೇಶಗಳನ್ನು ಹಾಕುತ್ತಿದ್ದಾರೆ. ಅದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಅಂತಹ ಸಾಮಾಜಿಕ ಜಾಲತಾಣ ಖಾತೆಗಳ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಜಯಲಕ್ಷ್ಮಿ ದರ್ಶನ್​ ದೂರಿನಲ್ಲಿ ಕೋರಿದ್ದಾರೆ.

ವಿಜಯಲಕ್ಷ್ಮೀ ಅವರ ಹಳೆಯ ಫೋಟೊಗಳನ್ನು ಬಳಸಿಕೊಂಡಿರುವ ಕಿಡಿಗೇಡಿಗಳು, ಈ ಘಟನೆ ನಡೆದಾಗ ಯಾರ ಮನೆ ಬಾಗಿಲಿಗೆ ಹೋಗಿದ್ದೆ? ಎಂದೆಲ್ಲ ಪೋಸ್ಟ್ ಮಾಡಿ, ಅದಕ್ಕೆ ಅಶ್ಲೀಲವಾಗಿ ಕಾಮೆಂಟ್ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.