ADVERTISEMENT

ಆಸ್ತಿ ಡಿಜಿಟಲೀಕರಣ ಗುರಿ: ಅಸಮಾಧಾನ

ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ಮಾನಸಿಕ ಒತ್ತಡ: ಆರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 23:59 IST
Last Updated 24 ನವೆಂಬರ್ 2023, 23:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಡಿಜಿಟಲೀಕರಣ ಮತ್ತು ಆಸ್ತಿ ತೆರಿಗೆ ವಿಮರ್ಶೆ ಪ್ರಕ್ರಿಯೆಗೆ ಗುರಿ ನೀಡಿರುವುದಕ್ಕೆ ಕಂದಾಯ ಸಿಬ್ಬಂದಿಯಿಂದ ಅಸಮಾಧಾನ ವ್ಯಕ್ತವಾಗಿದೆ.

‘ಕಂದಾಯ ನಿರೀಕ್ಷಕ, ತೆರಿಗೆ ನಿರೀಕ್ಷಕ ನಿತ್ಯ ತಲಾ 25 ಆಸ್ತಿಗಳಿಗೆ ಈ ಪ್ರಕ್ರಿಯೆಗಳನ್ನು ಮುಗಿಸಬೇಕು ಎಂದು ಗುರಿ ನೀಡಲಾಗಿದೆ. ಆದರೆ, ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಮತದಾರರ ಪ‍ಟ್ಟಿ ತಯಾರಿ ಕಾರ್ಯವೇ ಅಧಿಕವಾಗಿದೆ. ಈ ಸಂದರ್ಭದಲ್ಲಿ 25 ಆಸ್ತಿಗಳ ಗುರಿ ನೀಡಿರುವುದು ಸರಿಯಲ್ಲ’ ಎಂದಿದ್ದಾರೆ.

ADVERTISEMENT

‘ಎ ಹಾಗೂ ಬಿ ಖಾತೆಗಳನ್ನು ಹೊಂದಿರುವ ಆಸ್ತಿಗಳ ತೆರಿಗೆ ವಿಮರ್ಶೆ ಹಾಗೂ ನಕ್ಷೆ ಉಲ್ಲಂಘನೆ, ಸ್ವಯಂ ಘೋಷಿತ ತೆರಿಗೆಯಲ್ಲಿನ ವ್ಯತ್ಯಾಸಗಳನ್ನೆಲ್ಲ ತಪಾಸಣೆ ನಡೆಸಿ ಡಿಜಿಟಲೀಕರಣಗೊಳಿಸುವುದಕ್ಕೆ ಸಮಯ ಬೇಕಿದೆ. ಆದರೆ ಇದೀಗ ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಆಸ್ತಿ ತೆರಿಗೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದರು.

‘ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುವ ಸಂದರ್ಭದಲ್ಲಿ ಸಾಮಾನ್ಯವಾಗಿ ಆಸ್ತಿ ತೆರಿಗೆ ಪ್ರಕ್ರಿಯೆಗೆ ಸ್ವಲ್ಪ ವಿರಾಮ ನೀಡಲಾಗುತ್ತಿತ್ತು. ಈ ಬಾರಿ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ’ ಎಂದು ದೂರಿದರು.

‘ಕೆಲಸದ ಒತ್ತಡದಿಂದ ಹಲವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ರಕ್ತದೊತ್ತಡ, ಮಧುಮೇಹದ ಸಮಸ್ಯೆಗಳು ಹೆಚ್ಚಾಗಿದ್ದು, ಹಲವರಿಗೆ ಹೊಸದಾಗಿ ಈ ರೋಗಗಳು ಆವರಿಸಿಕೊಳ್ಳುತ್ತಿವೆ’ ಎಂದು ಹೇಳಿದರು.

ಮಾನವ ಹಕ್ಕುಗಳ ಆಯೋಗಕ್ಕೆ ದೂರು: ‘ಬಹಳಷ್ಟು ಕಾರ್ಯಗಳನ್ನು ಒಮ್ಮೆಲೇ ಮಾಡಲು ಸಾಧ್ಯವಾಗದೇ ಬಿಬಿಎಂಪಿ ಕಂದಾಯ ವಿಭಾಗದ ಹಲವು ಅನಾರೋಗ್ಯ ಪೀಡಿತರಾಗಿರುತ್ತಾರೆ ಮತ್ತು ಮಾನಸಿಕವಾಗಿ ಜರ್ಜರಿತರಾಗಿ ಖಿನ್ನತೆಗೆ ಒಳಗಾಗಿರುತ್ತಾರೆ. ಕೆಲಸ ಒತ್ತಡ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು’ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿಯನ್ನು ಅತ್ಯಧಿಕ ಕೆಲಸದ ಒತ್ತಡ ಹಾಕಿ ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ. ಮಾನವೀಯ ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಅವರಿಗೂ ಪತ್ರ ಬರೆದಿದ್ದಾರೆ.

‘ಕಂದಾಯ ಸಿಬ್ಬಂದಿ ಮನವಿ ನೀಡಿಲ್ಲ. ಅವರು ಮನವಿ ನೀಡಿದರೆ, ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.