ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 5ರಷ್ಟು ರಾಜಕೀಯ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗವಿಕಲರ ಒಕ್ಕೂಟದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‌ಡಬ್ಲ್ಯು), ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್‌ಡಬ್ಲ್ಯು) ಮತ್ತು ನಗರ ಪುನರ್ವಸತಿ ಕಾರ್ಯಕರ್ತರ (ಯುಆರ್‌ಡಬ್ಲ್ಯು) ಗೌರವ ಧನವನ್ನು ₹ 18 ಸಾವಿರದಿಂದ ₹ 25 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಒಕ್ಕೂಟದ ರಾಜ್ಯ ಅಧ್ಯಕ್ಷ ಶಿವಗೇನಿ ಅತನೂರ್ ಮಾತನಾಡಿ, ‘2026-27ನೇ ಸಾಲಿನ ಬಜೆಟ್‌ನಲ್ಲಿ ಅಂಗವಿಕಲರಿಗೆ ವಿಶೇಷ ಅನುದಾನ ನೀಡಬೇಕು. ಶಕ್ತಿ ಯೋಜನೆಯಡಿ ಪುರುಷರಿಗೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಬೇಕು. ಈಗಿನ ಬೆಲೆ ಏರಿಕೆಗೆ ಅನುಗುಣವಾಗಿ ಮಾಶಾಸನವನ್ನು ₹6 ಸಾವಿರಕ್ಕೆ ಹೆಚ್ಚಿಸಬೇಕು. ಅಂಗವಿಕಲರ ಮಕ್ಕಳಿಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುವಂತಾಗಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಅರುಣಕುಮಾರ್ ಎಸ್, ಪದಾಧಿಕಾರಿಗಳಾದ ರಘು ಎನ್., ಮಂಜುಳಾ, ತಿಪ್ಪಮ್ಮ, ರಾಜು ತೇರದಾಳ, ಮಹೇಶ ತೋಟದ, ರಾಜಪ್ಪ, ಅಮರೇಶ, ಶಿವಕುಮಾರ್, ರವಿ, ಪ್ರಶಾಂತ್, ನೇಮಪ್ಪ, ರಾಜೇಶ್, ವೀರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.