ADVERTISEMENT

ಬಿಡಿಎ ಘನತೆ ಬದಲಾಯಿಸಿ: ಡಿ.ಕೆ. ಶಿವಕುಮಾರ್

ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದು ಹಾಕಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:37 IST
Last Updated 6 ಜನವರಿ 2026, 16:37 IST
ಡಿ.ಕೆ. ಶಿವಕುಮಾರ್ 
ಡಿ.ಕೆ. ಶಿವಕುಮಾರ್    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಐವತ್ತು ವರ್ಷ ತುಂಬಿದ್ದು, ಈ ವರ್ಷದಿಂದ ಆದರೂ ಪ್ರಾಧಿಕಾರದ ಘನತೆ ಬದಲಾಯಿಸಿ. ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಅಹವಾಲು ನಿರ್ವಹಣೆ ಕುರಿತು ಬಿಡಿಎ ನೌಕರರಿಗೆ ಆಯೋಜಿಸಿರುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

‘ನನ್ನದೇ ಆದ ರೀತಿಯ ಇಂಟಿಲಿಜೆನ್ಸ್ ಮೂಲಕ ನಿಮ್ಮಲ್ಲಿ ನಡೆಯುತ್ತಿರುವ ಸಂತೆ, ದಂಧೆ, ಏಜೆಂಟ್‌ಗಳ ಪಟ್ಟಿ ಪಡೆಯಲು ಆರು ತಿಂಗಳು ಬೇಕಾಯಿತು. ಪ್ರತಿ ಹಂತದಲ್ಲಿ ಎಷ್ಟು ಕೊಳಕಿದೆ, ಎಷ್ಟು ಒಳ್ಳೆಯದಿದೆ ಎಂಬುದನ್ನು ಅರಿತಿದ್ದೇನೆ. ಹೀಗಾಗಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸ್ಕ್ಯಾನ್ ಮಾಡಲು ತೀರ್ಮಾನಿಸಲಾಗಿದೆ. ಕೆಲವರಿಗೆ ಇದರಿಂದ ಸಮಾಧಾನ ಆಗದಿರಬಹುದು. ಶೇಕಡ 10 ರಷ್ಟು ಸಿಬ್ಬಂದಿಯಿಂದ ಇಡೀ ಬಿಡಿಎಗೆ ಕೆಟ್ಟ ಹೆಸರು ಬರುತ್ತಿದೆ. ಆತ್ಮಸಾಕ್ಷಿಗೆ ಒಪ್ಪುವಂತೆಯಾದರೂ ಬಿಡಿಎ ಘನತೆಯನ್ನು ಬದಲಿಸಿಕೊಂಡು ಹೋಗಬೇಕು. ಈ ಬಗ್ಗೆ ಮಾರ್ಗದರ್ಶನ ನೀಡಲು ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಬಿಡಿಎ ಹಾಗೂ ಜಿಬಿಎ ಬೆಂಗಳೂರಿನ ಮುಖವಾಣಿ. ಪ್ರತಿ ಕಡತವನ್ನು ಕೊಕ್ಕೆ ಹಾಕಿ ಓಡಾಡಿಸುವ ಬದಲು ಸಕಾರಾತ್ಮಕ ಮನೋಭಾವದಲ್ಲಿ ಪರಿಹಾರ ಹುಡುಕಿ. ತಪ್ಪು ಮಾಡಿ ನನ್ನ ಕಣ್ಣಿಗೆ ಬೀಳಬೇಡಿ. ಬಿದ್ದರೆ ಬಡಿದು ಬಿಸಾಕುತ್ತೇನೆ. ಪ್ರಕರಣ ದಾಖಲಿಸಿದ ಬಳಿಕ, ಯಾರಿಂದ ಶಿಫಾರಸ್ಸು ತಂದರೂ ಬಗ್ಗುವುದಿಲ್ಲ. ಜನವರಿ 17ಕ್ಕೆ ಬಿಡಿಎ ರಚನೆಯಾಗಿ 50 ವರ್ಷ ಪೂರ್ಣಗೊಳ್ಳಲಿದೆ. ಬಿಡಿಎನಲ್ಲಿ ಪಾರದರ್ಶಕತೆ ತರಬೇಕು’ ಎಂದು ತಿಳಿಸಿದರು.

‘ನಾಗರಿಕರು ಬಂದಾಗ ಆದಷ್ಟು ಸಕಾರಾತ್ಮಕವಾಗಿ ಆಲೋಚಿಸಬೇಕು. ಎಲ್ಲದರಲ್ಲೂ ತಪ್ಪು ಕಂಡು ಹಿಡಿಯುತ್ತಾ ಹೋದರೆ, ಆಗುವುದಿಲ್ಲ. ಉದಾರ ಮನಸ್ಸಿನಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಅಧಿಕಾರ ಇದ್ದಾಗ ಬೇರೆಯವರಿಗೆ ಸಹಾಯ ಮಾಡಿ, ತೊಂದರೆ ಮಾಡಬೇಡಿ’ ಎಂದು ಕಿವಿಮಾತು ಹೇಳಿದರು.

‘ನಗರ ಯೋಜನೆಗೆ ಸಿವಿಲ್ ಹಾಗೂ ಆರ್ಕಿಟೆಕ್ಛರ್ ಎಂಜಿನಿಯರ್ ಹೊರತಾಗಿ ಬೇರೆ ಎಂಜಿನಿಯರ್‌ಗಳು ಬರುತ್ತಿದ್ದಾರೆ. ಹೀಗಾಗಿ ಕೆಂಪೇಗೌಡ ಪ್ರಾಧಿಕಾರದ ಜಾಗದಲ್ಲಿ ವಿಟಿಯು ಮೂಲಕ ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಆರಂಭಿಸಲಾಗುವುದು. ಮುಂದೆ ಎಲ್ಲಾ ನಗರಗಳಲ್ಲಿ ಯೋಜನೆ ರೂಪಿಸಬೇಕು. ಪ್ಲಾನಿಂಗ್ ವಿಚಾರದಲ್ಲಿ ಮೈಸೂರು ನಗರ ಬೆಂಗಳೂರಿಗಿಂತ ಉತ್ತಮವಾಗಿದೆ. ಬೆಂಗಳೂರಿನಲ್ಲಿ ಜಯನಗರ, ಮಲ್ಲೇಶ್ವರ, ಚಾಮರಾಜಪೇಟೆ ಹೊರತಾಗಿ ಬೇರೆ ಪ್ರದೇಶಗಳಲ್ಲಿ ಹೇಳಿಕೊಳ್ಳುವ ಯೋಜನೆ ರೂಪಿಸಿಲ್ಲ. ಇದಕ್ಕೆ ಅಧಿಕಾರಿಗಳು ಮಾತ್ರ ಕಾರಣವಲ್ಲ. ಆಡಳಿತ ನಡೆಸುವ ರಾಜಕಾರಣಿಗಳು, ಬಿಡಿಎ ಮುನ್ನಡೆಸಿರುವ ಆಯುಕ್ತರು, ಟೌನ್ ಪ್ಲಾನರ್ ಸೇರಿದಂತೆ ಎಲ್ಲರ ತಪ್ಪು ಇದೆ’ ಎಂದರು.

ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್ ಮಾತನಾಡಿ, ಪ್ರತಿ ಗುರುವಾರ ಗ್ರಾಹಕರ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ದೂರು ಸ್ವೀಕರಿಸಿ, ಪರಿಹಾರ ನೀಡಲಾಗುತ್ತಿದೆ. ಪ್ರಾಧಿಕಾರವನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ಈಗಾಗಲೇ 8 ಕೋಟಿ ಪೇಪರ್‌ಗಳನ್ನು ಸ್ಕ್ಯಾನ್‌ ಮಾಡಲಾಗಿದ್ದು, 13 ಲಕ್ಷ ಪೇಪರ್‌ಗಳು ಬಾಕಿ ಇವೆ. 12 ಸಾವಿರ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಪ್ರಾಧಿಕಾರದಲ್ಲಿ ಕಾಗದರಹಿತ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ವಿವರಿಸಿದರು. 

ಕಾರ್ಯಕ್ರಮದಲ್ಲಿ ಆಯುಕ್ತ ಪಿ.ಮಣಿವಣ್ಣನ್, ಪ್ರಾಧಿಕಾರದ ಸದಸ್ಯರಾದ ಬಿ.ಶಿವಣ್ಣ, ಪುಟ್ಟಸ್ವಾಮಿಗೌಡ, ಎ.ಸಿ.ಶ್ರೀನಿವಾಸ, ಎಸ್‌.ಆನಂದ್ ಪ್ರಸಾದ್, ಮಂಜುಳಾ ನಾಯ್ಡು, ಆರ್ಥಿಕ ಸದಸ್ಯ ಲೋಕೇಶ್‌ ಹಾಜರಿದ್ದರು.

ರಸ್ತೆ ನಿರ್ಮಾಣಕ್ಕೆ ₹50 ಸಾವಿರ ಕೋಟಿ

‘2010ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ–1 ಮಾಡಲು ಮುಂದಾಗಿದ್ದರು. ರಾಜಕಾರಣಿಗಳು ಹಾಗೂ ಆಯುಕ್ತರು ಸರಿಯಾಗಿ ನಿರ್ಧಾರ ಮಾಡಿದ್ದರೆ ₹ 26 ಸಾವಿರ ಕೋಟಿಯಲ್ಲಿ ಆಗುತ್ತಿತ್ತು. ಆದರೆ ಈಗ ಎರಡೂ ರಸ್ತೆ ನಿರ್ಮಾಣಕ್ಕೆ ₹50 ಸಾವಿರ ಕೋಟಿ ಬೇಕಾಗುತ್ತದೆ. ಭೂಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಭೂ ಸಂತ್ರಸ್ತರಿಗೆ ಪರಿಹಾರ ನೀಡಲು ಅನೇಕ ಆಯ್ಕೆಗಳನ್ನು ನೀಡಿದ್ದೇವೆ.  ಈ ಯೋಜನೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಿ ಇದಕ್ಕಿಂತ ಉತ್ತಮ ಪರಿಹಾರದ ಆಯ್ಕೆಯನ್ನು ಇಡೀ ದೇಶದಲ್ಲೇ ಯಾರೂ ನೀಡಲು ಸಾಧ್ಯವಿಲ್ಲ. ನನ್ನ ಅವಧಿಯಲ್ಲಿ ಒಂದು ಇಂಚು ಭೂಮಿಯನ್ನು ಡಿನೋಟಿಫಿಕೇಷನ್ ಮಾಡುವುದಿಲ್ಲ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.