
ಮೀಸಲಾತಿ (ಸಾಂಕೇತಿಕ ಚಿತ್ರ)
ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯದಲ್ಲಿ ಶೇಕಡ 33ರಷ್ಟು ಮಹಿಳಾ ಮೀಸಲಾತಿಗೆ ಎರಡು ಮೂರು ಪಕ್ಷಗಳು ಅಂಕಿತ ಹಾಕಿವೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲಾತಿಯಿದೆ. ಮುಂದಿನ ಚುನಾವಣೆ ಹೊತ್ತಿಗೆ ವಿಧಾನಸಭಾ ಚುನಾವಣೆಯಲ್ಲೂ ಮಹಿಳಾ ಮೀಸಲಾತಿ ಬರಬಹುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅಂತರರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದ ಅಂಗವಾಗಿ ಉಬುಂಟು ಒಕ್ಕೂಟ ಬುಧವಾರ ಆಯೋಜಿಸಿದ್ದ ಟುಗೇದರ್ ವೀ ಗ್ರೋ ನಾಲ್ಕನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಸಾಧಕಿಯರಿಗೆ ಉಬುಂಟು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಭವಿಷ್ಯದಲ್ಲಿ ಮಹಿಳಾ ಮೀಸಲಾತಿಯನ್ನು ಯಾರೂ ಸಹ ತಪ್ಪಿಸಲು ಆಗುವುದಿಲ್ಲ. ಮಹಿಳೆಯರು ರಾಜಕೀಯ ನಾಯಕತ್ವದ ಜೊತೆಯಲ್ಲಿ ಉದ್ದಿಮೆ ಹಾಗೂ ಇತರ ಕ್ಷೇತ್ರಗಳಲ್ಲೂ ನಾಯಕತ್ವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ರಾತ್ರಿ ಹೊತ್ತು ಹೋಟೆಲ್ ಸೇರಿದಂತೆ ಇತರ ಉದ್ದಿಮೆಗಳನ್ನು ನಡೆಸಲು ಪರವಾನಗಿ ನೀಡಬೇಕು ಎನ್ನುವ ಬೇಡಿಕೆಯಿದೆ. ಆಗ ಮಹಿಳಾ ಸುರಕ್ಷತೆಯೂ ಮುಖ್ಯವಾಗುತ್ತದೆ. ಈಗ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಜೊತೆಗೆ ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಲಾಗುವುದು’ ಎಂದರು.
‘ಬೆಂಗಳೂರಿನಲ್ಲಿ ಇರುವ 25 ಲಕ್ಷ ಎಂಜಿನಿಯರ್ ಗಳಲ್ಲಿ ಶೇ 50ರಷ್ಟು ಮಹಿಳೆಯರೇ ಇದ್ದಾರೆ. ವೈದ್ಯರಲ್ಲಿ ಶೇ 38ರಷ್ಟು, ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕ್ಷೇತ್ರದಲ್ಲಿ ಶೇ 80ರಷ್ಟು, ಹೋಟೆಲ್ ಉದ್ದಿಮೆಯಲ್ಲಿ ಶೇ 60ರಷ್ಟು ಮಹಿಳೆಯರು ಇದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.