ಬೆಂಗಳೂರು: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆಗೆ ಆದ್ಯತೆ ನೀಡಿರುವ ಅಲ್ಲಿನ ಕನ್ನಡ ಒಕ್ಕೂಟಗಳು ಸೋಮವಾರ ತಂಡಗಳಾಗಿ ತೆರಳಿ ಆತ್ಮವಿಶ್ವಾಸ ತುಂಬಿವೆ.
ಅಮೆರಿಕವು ಇರಾನ್ ಮೇಲೆ ದಾಳಿ ಮಾಡಿದ ನಂತರ ದುಬೈನಲ್ಲೂ ಶನಿವಾರ, ಭಾನುವಾರ ಕ್ಷಿಪಣಿ ದಾಳಿ ಕಂಡು ಬಂದರೂ ಸೋಮವಾರ ಶಾಂತಿಯುತ ವಾತಾವರಣವಿತ್ತು. ವಿಮಾನ ಸೇವೆ ಪುನರಾರಂಭ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಪ್ರವಾಸಿಗರು ಇದ್ದರು.
ಆದರೆ, ವಿಮಾನ ಸಂಚಾರಕ್ಕೆ ಅವಕಾಶ ಸಿಗದೇ ಇದ್ದುದರಿಂದ ಅಲ್ಲಿನ ಹೋಟೆಲ್‌ಗಳಲ್ಲಿ ತಂಗಿರುವ ಪ್ರವಾಸಿಗರನ್ನು ದುಬೈ ಕನ್ನಡಿಗರ ಕೂಟ ಸಹಿತ ನಾನಾ ಸಂಘಟನೆಗಳವರು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೂಟದ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಅವರ ತಂಡವು, ಬಳ್ಳಾರಿ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಬಂದಿರುವ ಸುಮಾರು 50 ಮಂದಿ ಪ್ರವಾಸಿಗರಿಗೆ ವಸತಿ, ಆಹಾರ ವ್ಯವಸ್ಥೆ ಹಾಗೂ ಇತರ ಅಗತ್ಯ ನೆರವು ಒದಗಿಸಿತು.
ಪ್ರವಾಸಕ್ಕೆ ಬಂದು ಅಲ್ಲಿ ಸಿಲುಕಿರುವ ಬೆಂಗಳೂರಿನ ಉದ್ಯಮಿ ಮಾಧವ್ ಸಿರಾನ್, ದುಬೈನಲ್ಲಿರುವ ಬೆಂಗಳೂರು ಟಿಫನ್‌ನ ಅಶ್ರಿತ್ ಕೂಡ ಊಟೋಪಚಾರಕ್ಕೆ ನೆರವಾದರು.
‘ದುಬೈನಲ್ಲಿ ಸಂಪೂರ್ಣ ಸುರಕ್ಷತೆಯಿದ್ದು, ಭಯ ಪಡುವ ಅಗತ್ಯವಿಲ್ಲ. ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ. ಭಾರತದ ರಾಯಭಾರ ಕಚೇರಿ ನೀಡುವ ಸೂಚನೆಗಳ ಜತೆಗೆ ಸ್ಥಳೀಯ ಆಡಳಿತದಿಂದ ಬರುವ ಸೂಚನೆ ಪಾಲಿಸಿ’ ಎಂದು ಮನವರಿಕೆ ಮಾಡಿದರು.
‘ಯುಎಇಯಲ್ಲಿ ಪರಿಸ್ಥಿತಿ ಸ್ವಲ್ಪ ಉದ್ವಿಗ್ನವಾಗಿದೆ. ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ ನಂತರ ಎಲ್ಲ ಪ್ರವಾಸಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕಳುಹಿಸಲು ಕನ್ನಡಿಗರ ಕೂಟ ಜವಾಬ್ದಾರಿ ತೆಗೆದುಕೊಳ್ಳಲಿದೆ. ಯುಎಇ ಸರ್ಕಾರವು ಅಗತ್ಯ ಸಹಕಾರ ನೀಡುತ್ತಿದೆ’ ಎಂದು ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.
ಕೊಲಾಸೊ ಸಹಾಯಹಸ್ತ
ದುಬೈನಲ್ಲಿ ನೆಲೆಸಿರುವ ಬೆಂಗಳೂರಿನ ಉದ್ಯಮಿ ರೊನಾಲ್ಡ್ ಕೊಲಾಸೊ ಅವರ ನೇತೃತ್ವದ 'ಕನ್ನಡಿಗಾಸ್ ಹೆಲ್ಪ್ ಲೈನ್' ತಂಡವು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯಹಸ್ತ ಚಾಚಿದೆ.
ದುಬೈನ ಕನ್ನಡಪರ ಸಂಘಟನೆಗಳೊಂದಿಗೆ ಕೊಲಾಸೊ ಆನ್‌ಲೈನ್‌ನಲ್ಲಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
‘ದುಬೈನಲ್ಲಿ ಸಿಲುಕಿರುವ ಕನ್ನಡಿಗ ಪ್ರವಾಸಿಗರ ತುರ್ತು ವ್ಯವಸ್ಥೆಗಳಿಗೆ ಆರ್ಥಿಕ ನೆರವು ಒದಗಿಸಲು ಸಿದ್ದನಿದ್ದೇನೆ. ಸರ್ಕಾರವೂ ಪರಿಹಾರ ಪ್ರಕಟಿಸುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.
ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಆರತಿ ಕೃಷ್ಣ ಕೊಲಾಸೊ ಅವರ ನಿವಾಸದಲ್ಲಿ ಆಶ್ರಯ ಪಡೆದಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಕನ್ನಡಿಗಾಸ್ ಹೆಲ್ಪ್‌ಲೈನ್ ಸಂಯೋಜಕ ಹಿದಾಯತ್ ಅಡ್ಡೂರು, ಕರ್ನಾಟಕ ಎನ್‌ಆರ್‌ಐ ಫೋರಂ ಅಧ್ಯಕ್ಷ ಪ್ರವೀಣ್‌ಶೆಟ್ಟಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಸಹಿತ ಹಲವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.