ADVERTISEMENT

PF: ‘ಡಿಫಾ‌ಲ್ಟ್‌ ಗುತ್ತಿಗೆದಾರರ’ ಮೇಲೆ ಕ್ರಮ

ಆರು ಸಾವಿರ ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ ಪಾವತಿಸದ ತ್ಯಾಜ್ಯ ಗುತ್ತಿಗೆದಾರರ ಪ್ರಕರಣ

ಆರ್. ಮಂಜುನಾಥ್
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
<div class="paragraphs"><p>ಇಪಿಎಫ್</p></div>

ಇಪಿಎಫ್

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಆರು ಸಾವಿರ ಪೌರ ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್‌) ಕಂತುಗಳನ್ನು ಪಾವತಿಸದ ‘ಡಿಫಾಲ್ಟ್‌ ಗುತ್ತಿಗೆದಾರರ’ ಮೇಲೆ ಕ್ರಮ ಕೈಗೊಳ್ಳಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಿರ್ಧರಿಸಿದೆ.

ADVERTISEMENT

ಬಿಬಿಎಂಪಿ ಪಾವತಿ ಮಾಡಿದ್ದರೂ ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಆರು ಸಾವಿರ ಪೌರಕಾರ್ಮಿಕರಿಗೆ 2011ರಿಂದ 2017ರ ಅವಧಿಯಲ್ಲಿ ಪಿಎಫ್‌ ಪಾವತಿಸಿರಲಿಲ್ಲ. ಬಿಬಿಎಂಪಿ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡು, ₹ 90 ಕೋಟಿಯನ್ನು ‘ಕಾರ್ಮಿಕರ ಭವಿಷ್ಯನಿಧಿ ಸಂಘಟನೆ’ (ಇಪಿಎಫ್‌ಒ) ತನ್ನ ಅಧೀನದಲ್ಲಿರಿಸಿಕೊಂಡಿದೆ.

ಇಪಿಎಫ್‌ ಕಾಯ್ದೆ ಸೆಕ್ಷನ್‌ 14 ‘ಬಿ’ ಮತ್ತು 7 ‘ಕ್ಯೂ’ ನಂತೆ ದಂಡ ವಿಧಿಸುವ ನಿರ್ಧಾರ ಕೈಗೊಂಡು, ವಿಳಂಬಕ್ಕಾದ ಬಡ್ಡಿಯನ್ನೂ ಡಿಫಾಲ್ಟ್‌ ಗುತ್ತಿಗೆದಾರರಿಂದ ವಸೂಲಿ ಮಾಡುವಂತೆ ಬೆಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು 2025ರ ಸೆಪ್ಟೆಂಬರ್‌ 15ರಂದು ಆದೇಶ ಹೊರಡಿಸಿದ್ದರು. ಅವರಿಗೆ ಯಾವುದೇ ರೀತಿಯ ಗುತ್ತಿಗೆಯನ್ನು ನೀಡಬಾರದು ಎಂದು ಆ ಆದೇಶದಲ್ಲಿ ತಿಳಿಸಿದ್ದರು.

‘ಈ ಬಗ್ಗೆ ಇಪಿಎಫ್‌ಒಗೆ ಬಿಬಿಎಂಪಿ ಮೆಲ್ಮನವಿ ಸಲ್ಲಿಸಿದರೂ ₹ 90.18 ಕೋಟಿಗಳ ಮೌಲ್ಯಮಾಪನವನ್ನು ಬದಲಿಸದೆ, ಅಂತಿಮ ಆದೇಶ ಹೊರಡಿಸಲಾಗಿದೆ. ಐದೂ ನಗರ ಪಾಲಿಕೆಗಳಿಂದ, ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯ ಮಂಡಳಿ/ ಕಾರ್ಮಿಕ ನ್ಯಾಯಾಲಯಕ್ಕೆ (ಸಿಜಿಐಟಿ) ಅಪೀಲು ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯ ಮಂಡಳಿಯ ಮೌಖಿಕ ಸೂಚನೆಯಂತ ಡಿಫಾಲ್ಟ್‌ ಗುತ್ತಿಗೆದಾರರನ್ನೂ ಸಹ ಪಾರ್ಟಿಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಸ್ಪಷವಾಗಿ ಉತ್ತರಿಸಿದ್ದಾರೆ.

‘ಇಪಿಎಫ್‌ಒ ಆದೇಶದಂತೆ ಡಿಫಾಲ್ಟ್‌ ಆಗಿರುವ ಗುತ್ತಿಗೆದಾರರನ್ನು ಪಟ್ಟಿ ಮಾಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌), ಅವರನ್ನು ಪಾರ್ಟಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ, ತ್ಯಾಜ್ಯ ನಿರ್ವಹಣೆಯ 33 ಹೊಸ ಪ್ಯಾಕೇಜ್‌ನಲ್ಲಿ ಈ ಡಿಫಾಲ್ಟ್‌ ಗುತ್ತಿಗೆದಾರರು ಇರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಡಿಫಾಲ್ಟ್‌ ಗುತ್ತಿಗೆದಾರರಿಗೆ ಮತ್ತೆ ಹೊಸ ಗುತ್ತಿಗೆಯನ್ನು ನೀಡಿದರೆ ಕಾನೂನು ತೊಡಕಾಗುತ್ತದೆ ಎಂದು ಕಾನೂನು ವಿಭಾಗ ಮೌಖಿಕವಾಗಿ ಹೇಳಿರುವುದರಿಂದ ಹೊಸ ಪ್ಯಾಕೇಜ್‌ ಅಂತಿಮಗೊಳಿಸುವುದು ವಿಳಂಬವಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಅಧಿಕಾರಿಗಳಿಂದ ಗುತ್ತಿಗೆದಾರರ ರಕ್ಷಣೆ’

‘ಪೌರ ಕಾರ್ಮಿಕರ ಭವಿಷ್ಯ ನಿಧಿ ಪಾವತಿಸದ ಡಿಫಾಲ್ಟ್‌ ಗುತ್ತಿಗೆದಾರರ ಮೇಲೆ ಇಪಿಎಫ್‌ಒ ಕ್ರಮ ಕೈಗೊಳ್ಳಲು ಆದೇಶಿಸಿದೆ. ಅಲ್ಲದೆ, ನಗರಾಭಿವೃದ್ಧಿ ಇಲಾಖೆ, ಜಿಬಿಎ ಮುಖ್ಯ ಆಯುಕ್ತರೂ ಡಿಫಾಲ್ಟ್‌ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಜರುಗಿಸಲು ಸೂಚಿಸಿದ್ದಾರೆ. ಇಷ್ಟಾದರೂ, ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳು ಯಾವುದೇ ಪ್ರಕ್ರಿಯೆ ನಡೆಸದೆ, ಅತಿ ಹೆಚ್ಚು ದಂಡ ಕಟ್ಟಬೇಕಾದ ಗುತ್ತಿಗೆದಾರರನ್ನು ರಕ್ಷಿಸುತ್ತಿದ್ದಾರೆ’ ಎಂದು ಬೆಂಗಳೂರು ನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರು–ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌. ಬಾಲಸುಬ್ರಮಣಿಯಂ ಆರೋಪಿಸಿದರು.

‘ಗುತ್ತಿಗೆದಾರರು ಅಕ್ರಮ ನಡೆಸಿ, ಪಾಲಿಕೆ ಹಣವನ್ನು ಲೂಟಿ ಮಾಡಿದ್ದಾರೆ. ಅಂತಹವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳದೆ, ಬಿಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಡಿಫಾಲ್ಟ್‌ ಗುತ್ತಿಗೆದಾರರೇ ಅವರನ್ನು
ಸುತ್ತುವರಿದಿದ್ದು, ನಿಯಮಗಳಂತೆ ಕೆಲಸ ಮಾಡುತ್ತಿರುವ ಗುತ್ತಿಗೆದಾರರಿಗೆ ತೊಂದರೆ ನೀಡಲಾಗುತ್ತಿದೆ. ಡಿಫಾಲ್ಟ್‌ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಕ್ರಮ ಕೈಗೊಳ್ಳದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.