ಆರೋಪಿಗಳಿಂದ ಜಪ್ತಿ ಮಾಡಿಕೊಂಡ ನೋಟುಗಳು
ಬೆಂಗಳೂರು: ಅಸಲಿ ಹಣಕ್ಕೆ ಪ್ರತಿಯಾಗಿ ಮೂರು ಪಟ್ಟು ನಕಲಿ ನೋಟು ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದ ತಮಿಳುನಾಡಿನ ಮೂವರು ಆರೋಪಿಗಳನ್ನು ಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ರಾಜೇಶ್ವರನ್ (43), ಶೇಕ್ ಮೊಹಮ್ಮದ್ (40) ಹಾಗೂ ಮಿರಾನ್ ಮೊಹಿದ್ದೀನ್ (40) ಬಂಧಿತರು.
ದಾಳಿ ವೇಳೆ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ವಿವಿಧ ಮೌಲ್ಯದ 31 ಅಸಲಿ ನೋಟುಗಳು ಹಾಗೂ ಬಿಳಿ ಹಾಳೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ ಜಗಲಾಸರ್ ತಿಳಿಸಿದರು.
‘ಅಸಲಿ ಹಣ ನೀಡಿದರೆ ಅದಕ್ಕೆ ಪ್ರತಿಯಾಗಿ ನಕಲಿ ನೋಟುಗಳನ್ನು ಮೂರುಪಟ್ಟು ನೀಡುವುದಾಗಿ ವ್ಯಾಪಾರಸ್ಥರು, ಉದ್ಯಮಿಗಳಿಗೆ ಆರೋಪಿಗಳು ನಂಬಿಸುತ್ತಿದ್ದರು. ಆರಂಭದಲ್ಲಿ ವ್ಯಾಪಾರಸ್ಥರಿಗೆ ನಂಬಿಕೆ ಬರುವಂತೆ ಅಸಲಿಯಂತೆಯೇ ಇರುವ ನೋಟುಗಳನ್ನು ನೀಡುತ್ತಿದ್ದರು. ನಂಬಿದವರು ಹಣ ಕೊಟ್ಟ ಬಳಿಕ ಅಲ್ಪ ಪ್ರಮಾಣದಲ್ಲಿ ಅಸಲಿ ನೋಟುಗಳ ನಡುವೆಯೇ ಬಿಳಿ ಹಾಳೆಗಳ ಬಂಡಲ್ ಇಟ್ಟು ವಂಚಿಸುತ್ತಿದ್ದರು’ ಎಂದು ಮಾಹಿತಿ ನೀಡಿದರು.
‘₹3 ಲಕ್ಷ ಹಣಕ್ಕೆ ಪ್ರತಿಯಾಗಿ ₹500 ಮುಖಬೆಲೆಯ ₹10 ಲಕ್ಷ ನಕಲಿ ನೋಟುಗಳನ್ನು ವರ್ಗಾವಣೆ ಮಾಡಲು ಬಂದಿದ್ದ ಆರೋಪಿಗಳ ಕುರಿತು ಬಾತ್ಮೀದಾರರಿಂದ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.
‘ದಾಳಿ ವೇಳೆ ಪರಿಶೀಲಿಸಿದಾಗ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಹಣದಲ್ಲಿ 31 ಅಸಲಿ ನೋಟುಗಳು ಹಾಗೂ ಬಿಳಿ ಹಾಳೆಗಳು ಪತ್ತೆಯಾಗಿವೆ. ಇವರೊಂದಿಗೆ ವ್ಯವಹಾರ ಮಾಡಿದ್ದವರ ಕುರಿತು ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಳಿಯಿದ್ದ ಸೂಟ್ಕೇಸ್ನ ಖೋಟಾ ನೋಟುಗಳು ಇರಲಿಲ್ಲ. ಬದಲಿಗೆ ನಿಜವಾದ ನೋಟುಗಳ ಮಧ್ಯೆ ಬಿಳಿ ಹಾಳೆಗಳನ್ನು ಇಟ್ಟು ವಂಚನೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಡಿಸಿಪಿ ಹೇಳಿದರು.ರಾಜರಾಜೇಶ್ವರನ್
ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿರುವ ಸಾಧ್ಯತೆಯಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.-ಲೋಕೇಶ್ ಬಿ ಜಗಲಾಸರ್, ಡಿಸಿಪಿ ದಕ್ಷಿಣ ವಿಭಾಗ
ರಾಜರಾಜೇಶ್ವರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.