ಎಫ್‌ಐಆರ್
ಬೆಂಗಳೂರು: ಮಹಿಳೆಗೆ ಚಾಕು ತೋರಿಸಿ ಹಣ, ಚಿನ್ನ ಸುಲಿಗೆ ಮಾಡಿದ್ದಲ್ಲದೇ, ಆಕೆಯ ಜತೆಗಿನ ಖಾಸಗಿ ಕ್ಷಣಗಳ ಫೋಟೊ, ವಿಡಿಯೊಗಳನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ ಆರೋಪದ ಮೇಲೆ ರೌಡಿಶೀಟರ್ ಸುರೇಶ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
37 ವರ್ಷದ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ರೌಡಿಶೀಟರ್ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾಡಿ ವಾರಂಟ್ ಪಡೆದು ಆರೋಪಿಯ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ಕ್ಯಾಬ್ ಚಾಲಕನೆಂದು ಸುಳ್ಳು ಹೇಳಿ ಸಂತ್ರಸ್ತೆಗೆ ಸೇರಿದ ಮನೆಯನ್ನು ಭೋಗ್ಯಕ್ಕೆ ಪಡೆದು ಹಲವು ವರ್ಷಗಳಿಂದ ಆರೋಪಿ ವಾಸವಿದ್ದ. ಮಹಿಳೆಯ ಸ್ನೇಹ ಸಂಪಾದಿಸಿ ಸಲುಗೆಯಿಂದಿದ್ದ. ಆಕೆಯ ವಿರೋಧದ ನಡುವೆಯೂ ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊ ಸೆರೆಹಿಡಿದುಕೊಂಡಿದ್ದ. ಆರೋಪಿಯ ಮೊಬೈಲ್‌ನಲ್ಲಿ ಹಲವು ಮಹಿಳೆಯರ ಖಾಸಗಿ ವಿಡಿಯೊ, ಫೋಟೊಗಳು ಇರುವುದನ್ನು ಗಮನಿಸಿದ್ದ ಸಂತ್ರಸ್ತೆ, ಆತನೊಂದಿಗೆ ಗಲಾಟೆ ಮಾಡಿಕೊಂಡು ನಿರ್ಲಕ್ಷಿಸಲಾರಂಭಿಸಿದ್ದಳು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಇದರಿಂದ ಕೋಪಗೊಂಡ ಆರೋಪಿ, ಮಹಿಳೆಯ ಖಾಸಗಿ ಫೋಟೊ, ವಿಡಿಯೊಗಳನ್ನು ಆಕೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಮಾನಹಾನಿ ಮಾಡಿದ್ದಾನೆ. ನವೆಂಬರ್ 30 ರಂದು ವಾಲ್ಮೀಕಿ ಸರ್ಕಲ್ ಬಳಿ ಮಹಿಳೆಯನ್ನು ಅಡ್ಡಗಟ್ಟಿದ್ದ ಆರೋಪಿ, ಚಾಕು ತೋರಿಸಿ ಬೆದರಿಸಿ ಮೊಬೈಲ್ ಫೋನ್, ಕಾರು ಹಾಗೂ 18 ಗ್ರಾಂ ಚಿನ್ನದ ಓಲೆ ದೋಚಿ ಪರಾರಿಯಾಗಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿ ರೌಡಿಶೀಟರ್ ಸುರೇಶ್ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲೇ ಆತ ತುಮಕೂರು ನ್ಯಾಯಾಲಯದ ಬಳಿ ತನ್ನ ಸಹೋದರನಿಗೆ ಚಾಕು ಇರಿದ ಪ್ರಕರಣದಲ್ಲಿ ಜೈಲುಪಾಲಾಗಿರುವುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.