ADVERTISEMENT

ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ವಿಷ್ಣುವರ್ಧನ್ ಸಮಾಧಿ ಇರುವ ಪ್ರದೇಶ* ಬೆಂಗಳೂರು ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆ ಪತ್ರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 0:30 IST
Last Updated 30 ಆಗಸ್ಟ್ 2025, 0:30 IST
ಅಭಿಮಾನ್‌ ಸ್ಟುಡಿಯೋಗೆ ನೀಡಿದ್ದ ಭೂಮಿ
ಅಭಿಮಾನ್‌ ಸ್ಟುಡಿಯೋಗೆ ನೀಡಿದ್ದ ಭೂಮಿ   

ಬೆಂಗಳೂರು: ನಟ ಟಿ.ಎನ್‌. ಬಾಲಕೃಷ್ಣ ಅವರ ಅಭಿಮಾನ್‌ ಸ್ಟುಡಿಯೋಗೆ ಮಂಜೂರು ಮಾಡಿದ್ದ, ನಟ ವಿಷ್ಣುವರ್ಧನ್‌ ಅವರ ಸಮಾಧಿ ತೆರವಿನಿಂದ ವಿವಾದಕ್ಕೆ ಗುರಿಯಾಗಿದ್ದ ಕೆಂಗೇರಿಯ ಅರಣ್ಯ ಭೂಮಿಯನ್ನು ವಾಪಸ್‌ ಪಡೆಯುವಂತೆ ಅರಣ್ಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

‘ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೆ ನಂ. 26ರಲ್ಲಿ ಹಂಚಿಕೆ ಮಾಡಲಾಗಿದ್ದ ಅರಣ್ಯ ಪ್ರದೇಶದ 20 ಎಕರೆ ಭೂಮಿಯ ಮಂಜೂರಾತಿ ಆದೇಶ ರದ್ದುಪಡಿಸಬೇಕು. ಇದನ್ನು ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿಕೊಡಬೇಕು’ ಎಂದು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ರವೀಂದ್ರಕುಮಾರ್‌ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಅರಣ್ಯ ಭೂಮಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ 2025ರ ಮೇ 15ರಂದು ನೀಡಿರುವ ಆದೇಶದ ಮೇರೆಗೆ ನಿಗದಿತ ಉದ್ದೇಶ ಬಿಟ್ಟು ಮಾರಾಟ ಮಾಡಿರುವ ಭೂಮಿಯನ್ನು ಹಿಂದಕ್ಕೆ ಪಡೆಯಬೇಕು. 1995ರ ಟಿ.ಎನ್‌.ಗೋದವರ್ಮನ್‌ ತಿರುಮಲಪಾಡ್‌ ಹಾಗೂ ಕೇಂದ್ರ ಸರ್ಕಾರ, ಇತರರ ನಡುವಿನ ವ್ಯಾಜ್ಯ ಪ್ರಕರಣದ ತೀರ್ಪಿನ ಆದೇಶವನ್ನು ಆಧರಿಸಿ ಮಂಜೂರಾತಿ ರದ್ದು ಮಾಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಬೇಕು ಎಂದು ಕೋರಿದ್ದಾರೆ.

ADVERTISEMENT

ಡಿಸಿಎಫ್‌ ಪತ್ರದಲ್ಲಿ ಏನಿದೆ:

* ಮೈಲಸಂದ್ರ ಗ್ರಾಮದ ಎರಡು ಸರ್ವೆ ನಂ. 22ರಲ್ಲಿ 78 ಎಕರೆ 18ಗುಂಟೆ ಹಾಗೂ ಸರ್ವೆ ನಂ. 26ರಲ್ಲಿ 62 ಎಕರೆ 20 ಗುಂಟೆ ಪ್ರದೇಶವನ್ನು ತುರಹಳ್ಳಿ ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಒಮ್ಮೆ ಒಂದು ಪ್ರದೇಶವನ್ನು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದ ಬಳಿಕ, ಅದನ್ನು ಅರಣ್ಯವಲ್ಲ ಎಂದು ಯಾವುದೇ ಅಧಿಸೂಚನೆ ಹೊರಡಿಸದೇ ಇದ್ದರೆ, ಅದನ್ನು ಅರಣ್ಯ ಪ್ರದೇಶ ಎಂದು ಪರಿಭಾವಿಸಲಾಗುತ್ತದೆ.

* 1979ರ ಮಾರ್ಚ್‌ 21ರಂದು ಸರ್ಕಾರಿ ಆದೇಶದಲ್ಲಿ ಅಭಿಮಾನ್‌ ಸ್ಟುಡಿಯೊ ನಿರ್ಮಾಣ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಎಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದೆ. ಸರ್ಕಾರದ ಪೂರ್ವಾನುಮತಿ ಇಲ್ಲದೇ ಮಾರಾಟ, ಪರಭಾರೆ ಮಾಡಬಾರದು. ಹಾಗೇನಾದರೂ ಮಾಡಿದರೆ ಮಂಜೂರಾತಿ ರದ್ದುಪಡಿಸಿ ಭೂಮಿಯನ್ನು ಹಿಂಪಡೆಯಲಾಗುವುದು ಎಂದು ಅಂದಿನ ಆದೇಶದಲ್ಲೂ ಉಲ್ಲೇಖಿಸಲಾಗಿದೆ.

*ನಟ ಟಿ.ಎನ್‌. ಬಾಲಕೃಷ್ಣ ಅವರು ಭೂ ಪರಿವರ್ತನಾ ಶುಲ್ಕ ವಿನಾಯಿತಿ ನೀಡುವಂತೆ, ಅದೇ ವರ್ಷ ಪತ್ರ ಬರೆದಿದ್ದದ್ದರು. ಐದು ವರ್ಷದೊಳಗೆ ಅಭಿಮಾನ್‌ ಸ್ಟುಡಿಯೊ ನಿರ್ಮಾಣ ಪೂರ್ಣಗೊಳಿಸುವಂತೆ, ಈ ಉದ್ದೇಶ ಬಿಟ್ಟು ಬೇರೆ ಕಾರಣಗಳಿಗಾಗಿ ಬಳಸಿದರೆ ಷರತ್ತಿನ ಉಲ್ಲಂಘನೆಯಾಗಲಿದ್ದು, ಮಂಜೂರಾತಿ ರದ್ದಾಗಿ ಭೂಮಿ ವಾಪಸ್‌ ಪಡೆದಾಗ ಯಾವುದೇ ಪರಿಹಾರವನ್ನೂ ನೀಡಲಾಗುವುದಿಲ್ಲ ಎಂದೂ ತಿಳಿಸಲಾಗಿದೆ.

*  ಇದಾದ ಬಳಿಕ ಟಿ.ಎನ್‌.ಬಾಲಕೃಷ್ಣ ಅವರ ಪುತ್ರರಾದ ಶ್ರೀನಿವಾಸ್‌ ಹಾಗೂ ಗಣೇಶ್‌ ಅವರು ಹಂಚಿಕೆ ಮಾಡಿರುವ 20 ಎಕರೆಯಲ್ಲಿ 10 ಎಕರೆ ಜಮೀನನ್ನು ಮಾರಾಟ ಮಾಡಲು ಕೋರಿದ್ದು, ಇದಕ್ಕೆ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು. ಮಾರಾಟ ಮಾಡಿ ಬಂದ ಹಣದಲ್ಲಿ ಸ್ಟುಡಿಯೊವನ್ನು ಅತ್ಯಾಧುನಿಕವಾಗಿ ನಿರ್ಮಿಸಬೇಕು ಎಂದು ಷರತ್ತುಗಳನ್ನೂ ವಿಧಿಸಿದ್ದರು. ಆದರೆ, ಇದರಲ್ಲಿ 12 ಎಕರೆಯನ್ನು ಮಾರಾಟ ಮಾಡಿದ್ದರೂ ಸ್ಟುಡಿಯೊವನ್ನು ನಿರ್ಮಿಸಿಲ್ಲ. ಜಾಗ ಯಥಾಸ್ಥಿತಿಯಲ್ಲಿದೆ. ಈ ಸಂಬಂದ 2015ರಲ್ಲಿಯೇ ಗಣೇಶ್‌ ಅವರಿಗೆ ನೋಟಿಸ್‌ ಅನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಜಾರಿ ಮಾಡಲಾಗಿದೆ.

* ಈಗ ಗಣೇಶ್‌ ಹಾಗೂ ಶ್ರೀನಿವಾಸ್‌ ಪುತ್ರ ಬಿ.ಎಸ್‌.ಕಾರ್ತಿಕ್‌ ಅವರು ಬಿ.ಕೆ.ರಾಘವೇಂದ್ರ ಅವರಿಗೆ ಒಂದು ಎಕರೆಗೆ ₹ 14,37,1500 (ಪ್ರತಿ ಚದರಡಿ ₹3,500)ಗಳಂತೆ 10 ಎಕರೆಯನ್ನು 2021ರ ಆಗಸ್ಟ್‌ 16ರಂದು ಮಾರಾಟ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಅನಧಿಕೃತ. ಅಲ್ಲದೇ, ಮೂರನೇ ವ್ಯಕ್ತಿಯ ಮಾಲೀಕತ್ವವನ್ನು ಸೃಷ್ಟಿಸಿರುವುದು ಕಂಡು ಬಂದಿದ್ದು, 1970ರಲ್ಲಿ ವಿಧಿಸಿದ್ದ ಷರತ್ತಿನ ಉಲ್ಲಂಘನೆಯೂ ಆಗಿದೆ.

ವಿಷ್ಣುವರ್ಧನ್
ಅಭಿಮಾನ್ ಸ್ಟುಡಿಯೋದ ಜಾಗ ಅರಣ್ಯಭೂಮಿ ಎಂದು ಘೋಷಿಸಿರುವುದು ಗೊಂದಲ ಸೃಷ್ಟಿಸಿದೆ. ಅರಣ್ಯಭೂಮಿ ಎನ್ನುವ ಕಾರಣ ನೀಡಿ ಅಲ್ಲಿ ವಿಷ್ಣುವರ್ಧನ್‌ ಪುಣ್ಯಭೂಮಿ ಬಾಲಕೃಷ್ಣರ ಸಮಾಧಿ ನಿರ್ಮಿಸದಂತೆ ತಡೆಯುವುದು ಬೇಡ.
ವೀರಕಪುತ್ರ ಶ್ರೀನಿವಾಸ ಅಧ್ಯಕ್ಷ ವಿಷ್ಣು ಸೇನಾ ಸಮಿತಿ.

ಮುಂದೆ ಏನಾಗಲಿದೆ?

‘ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೆ ಬರುವ ಮುನ್ನ ಅರಣ್ಯ ಭೂಮಿಯನ್ನು ಉದ್ಯಮ ಸ್ಥಾಪನೆ ಸಹಿತ ನಾನಾ ಉದ್ದೇಶಗಳಿಗೆ ನೀಡಲಾಗುತ್ತಿತ್ತು. ಈ ರೀತಿ ಕರ್ನಾಟಕದಲ್ಲಿ ಹಲವು ಕಡೆ ಭೂಮಿ ನೀಡಲಾಗಿದೆ. ಈ ಕಾಯಿದೆ ಬಂದ ನಂತರ ಅರಣ್ಯ ಭೂಮಿ ನೀಡಲು ಅವಕಾಶವಿಲ್ಲ. ಹಿಂದೆ ಭೂಮಿ ನೀಡಿ ನಿಗದಿತ ಉದ್ದೇಶಕ್ಕೆ ಬಳಕೆ ಮಾಡದೇ ಇದ್ದರೆ ಅದನ್ನು ವಾಪಸ್‌ ಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ’ ಎಂದು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್‌ ಕುಮಾರ್ ಹೇಳಿದರು. ‘ಅರಣ್ಯ ಇಲಾಖೆ ಕಂದಾಯ ಇಲಾಖೆ ವರದಿ ಆಧರಿಸಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಅರಣ್ಯ ಭೂಮಿ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಅರಣ್ಯ ಭೂಮಿ ಎಂದು ಅಧಿಸೂಚನೆ ಹೊರಡಿಸಿದರೆ ಯಾವುದೇ ಉದ್ದೇಶಕ್ಕೂ ಆ ಭೂಮಿ ನೀಡಲು ಬರುವುದಿಲ್ಲ. ಈಗ ಬೆಂಗಳೂರಿನಲ್ಲಿ ಎಚ್‌ಎಂಟಿಗೆ ನೀಡಿದ ಭೂಮಿಯ ವಿವಾದವೂ ಇದೇ ಸ್ವರೂಪದಲ್ಲಿದೆ. ಇಂತಹದೇ ಹಲವು ಪ್ರಕರಣಗಳಲ್ಲಿ ಕಾನೂನು ಹೋರಾಟ ಮುಂದುವರಿದಿದೆ’ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.