ಬೆಂಗಳೂರು: ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸುಮಾರು ಒಂಬತ್ತು ವರ್ಷದಿಂದ ಸುರಿಯುತ್ತಿರುವ ತ್ಯಾಜ್ಯದಿಂದ 300 ಕೋಟಿ ಲೀಟರ್‌ಗೂ ಹೆಚ್ಚು ದ್ರವ ತ್ಯಾಜ್ಯ (ಲಿಚೆಟ್) ತುಂಬಿಕೊಂಡಿದೆ. ಇದರಿಂದ ಸುತ್ತಮುತ್ತಲ ಹಳ್ಳಿಗಳಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗುವ ಜೊತೆಗೆ ಅಂತರ್ಜಲ ವಿಷಕಾರಿಯಾಗಿದೆ.
ಬೆಂಗಳೂರಿನ 198 ವಾರ್ಡ್‌ಗಳಲ್ಲೂ ಸಂಗ್ರಹವಾಗುವ ಮಿಶ್ರ ತ್ಯಾಜ್ಯ ಹಾಗೂ ಸಂಸ್ಕರಣಾ ಘಟಕಗಳಲ್ಲಿ ಉಳಿದ ತ್ಯಾಜ್ಯವನ್ನು ಸುಮಾರು 500ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳ ಮೂಲಕ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ.
ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಂಪ್ಯಾಕ್ಟರ್‌ಗಳು ಸಾಲುಗಟ್ಟಿ ತ್ಯಾಜ್ಯವನ್ನು ಸುರಿದುಹೋಗುತ್ತವೆ. ಸಾಲುಗಟ್ಟಿ ನಿಲ್ಲುವ ಕಾಂಪ್ಯಾಕ್ಟರ್‌ಗಳಿಂದ ದ್ರವತ್ಯಾಜ್ಯ ಸುರಿಯುತ್ತಲೇ ಇರುತ್ತದೆ. ಬೆಳ್ಳಹಳ್ಳಿ ಕ್ರಾಸ್‌ನಿಂದ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶ ಸಾಗುವ ಸುಮಾರು ಒಂದೂವರೆ ಕಿ.ಮೀ. ರಸ್ತೆಯುದ್ದಕ್ಕೂ ದ್ರವತ್ಯಾಜ್ಯ ಸುರಿದಿರುತ್ತದೆ. ಇದು ಮಣ್ಣಿನ ರಸ್ತೆಯಾಗಿದ್ದರೂ, ಡಾಂಬಾರಿಗಿಂತ ಗಾಢ ಕಪ್ಪು ಬಣ್ಣಕ್ಕೆ ತಿರುಗಿದೆ.
ಭೂಭರ್ತಿ ಪ್ರದೇಶದಲ್ಲಿ ಒಂಬತ್ತಕ್ಕೂ ಹೆಚ್ಚು ವರ್ಷಗಳಿಂದ ಎಲ್ಲ ರೀತಿಯ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ. ತ್ಯಾಜ್ಯ ಸುರಿದು, ಅದರ ಮೇಲೆ ಕಟ್ಟಡ ತ್ಯಾಜ್ಯವನ್ನು ಹಾಕಲಾಗುತ್ತಿದ್ದರೂ ದ್ರವ ತ್ಯಾಜ್ಯ ಸಮೀಪದ ನಾಲ್ಕಾರು ಹಳ್ಳಗಳಿಗೆ ಸೇರಿಕೊಳ್ಳುತ್ತಿದೆ. ಮೇಲ್ನೋಟಕ್ಕೆ ಕಸ ಎಂದು ಕಂಡುಬಂದರೂ, 50 ಅಡಿಗೂ ಹೆಚ್ಚು ಆಳದಲ್ಲಿ ದ್ರವತ್ಯಾಜ್ಯ ತುಂಬಿಕೊಂಡಿದೆ.
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದ ಸಮೀಪವೇ ಇರುವ ಬೆಳ್ಳಹಳ್ಳಿ ಕೆರೆ ದ್ರವ ತ್ಯಾಜ್ಯದಿಂದ ತುಂಬಿಕೊಂಡಿದೆ. ಕೆರೆಯ ನೀರು ಕಪ್ಪಾಗಿದ್ದು, ಮುಟ್ಟಲೂ ಸಮೀಪದ ಜನರು ಭಯಪಡುತ್ತಾರೆ. ಇದೇ ಕೆರೆಯ ಹಿಂಭಾಗದಲ್ಲಿ ಹಲವು ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಸಾವಿರಾರು ಜನರು ವಾಸಿಸುತ್ತಾರೆ. ಅವರು ನಿತ್ಯವೂ ಕಸದ ದುರ್ವಾಸನೆಯನ್ನು ಸಹಿಸಿಕೊಳ್ಳಬೇಕಾಗಿದೆ. ಅಲ್ಲದೆ, ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ.
‘ಬೆಳ್ಳಹಳ್ಳಿ ಕೆರೆ ಅಷ್ಟೇ ಅಲ್ಲ, ಕಣ್ಣೂರು ಕೆರೆ, ಚಿಕ್ಕಗುಬ್ಬಿ ಕೆರೆ, ದೊಡ್ಡಗುಬ್ಬಿ ಕೆರೆ, ರಾಂಪುರ ಕೆರೆಗಳಲ್ಲೂ ದ್ರವ ತ್ಯಾಜ್ಯ ಹರಿಯುತ್ತಿದೆ. ಈ ಎಲ್ಲ ಕೆರೆಗಳು ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸುವಂತಿದ್ದವು. ಆದರೆ ಇದೀಗ ಇಲ್ಲಿನ ನೀರನ್ನು ಕೈಯಲ್ಲಿ ಮುಟ್ಟಲೂ ಸಾಧ್ಯವಿಲ್ಲದಂತಾಗಿದೆ’ ಎಂದು ಬೆಳ್ಳಹಳ್ಳಿ ನಿವಾಸಿ ರಾಮಚಂದ್ರಪ್ಪ ಹೇಳಿದರು.
‘ಸಮಸ್ಯೆ ಹೆಚ್ಚಾದಾಗ ನಾವು ಪ್ರತಿಭಟಿಸುತ್ತೇವೆ. ಒಂದಷ್ಟು ಅಧಿಕಾರಿಗಳು ಬಂದು ತೇಪೆಹಚ್ಚಿ ಹೋಗುತ್ತಾರೆ. ಮತ್ತೆ ಅದೇ ಸಂಕಟ. ನಾಲ್ಕಾರು ವರ್ಷಗಳಿಂದ ಬಾಧಿಸುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಯಾರೂ ನೀಡುತ್ತಿಲ್ಲ’ ಎಂದು ಬಂಡೆ ಹೊಸೂರಿನ ನಾಗರಾಜು ದೂರಿದರು.
‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಹಲವು ವರ್ಷಗಳಿಂದ ವೈಜ್ಞಾನಿಕವಾಗಿಯೇ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಕೆರೆಗಳಿಗೆ ದ್ರವತ್ಯಾಜ್ಯ ಸೇರುತ್ತಿಲ್ಲ ಎಂದು ರಾಜ್ಯ ಮಾಲಿನ್ಯ ಮಂಡಳಿ ವರದಿ ಹೇಳುತ್ತದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿರುವ ಬೆಳ್ಳಹಳ್ಳಿ ಕೆರೆಯಲ್ಲಿ ಕಪ್ಪನೆ ನೀರು ತುಂಬಿದೆ
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದ ಸಮೀಪವಿರುವ ಅಪಾರ್ಟ್‌ಮೆಂಟ್‌ಗಳು
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಪಾಳುಬಿದ್ದಿರುವ ದ್ರವತ್ಯಾಜ್ಯ ಸಂಸ್ಕರಣೆ ಘಟಕ
ದ್ರವತ್ಯಾಜ್ಯ ಇಲ್ಲಿಂದ ಸಾಗಿಸಿದರೆ ಸಾಕು
‘ಕೋಟ್ಯಂತರ ಲೀಟರ್ ದ್ರವ ತ್ಯಾಜ್ಯವನ್ನು ಇಲ್ಲಿಂದ ಮೊದಲು ಸಾಗಿಸಬೇಕು. ಇದರಿಂದಲೇ ನಮಗೆ ಅತ್ಯಂತ ಸಮಸ್ಯೆ ಉಂಟಾಗಿದೆ. ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ನಿತ್ಯವೂ ದ್ರವ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ದುರ್ವಾಸನೆ ಜೊತೆಗೆ ಸುತ್ತಮುತ್ತಲಿನ ಕೆರೆಗಳಿಗೆ ದ್ರವ ತ್ಯಾಜ್ಯ ಸೇರಿಕೊಳ್ಳುತ್ತಿದೆ. ಅಂತರ್ಜಲಕ್ಕೂ ದ್ರವ ತ್ಯಾಜ್ಯ ಸೇರಿಕೊಂಡು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಅವೈಜ್ಞಾನಿಕವಾಗಿ ನಡೆಯುತ್ತಿರುವ ವಿಲೇವಾರಿ ನಿಲ್ಲಬೇಕು’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಅಶೋಕ್ ಹೇಳಿದರು. ವೃದ್ಧರಿಗೆ ಹೆಚ್ಚು ಸಂಕಷ್ಟ ‘ಕೊಳವೆಬಾವಿ ನೀರು ಕುಡಿಯುತ್ತಿರುವ ಸ್ಥಳೀಯರಿಗೆ ಹಲವು ರೀತಿಯ ರೋಗಗಳು ಬರುತ್ತಿವೆ. ಹಲ್ಲು ಶ್ವಾಸಕೋಶ ಸಮಸ್ಯೆ ಎದೆನೋವು ಕೂಡ ಕಾಣಿಕೊಳ್ಳುತ್ತಿದೆ. ರೋಗಿಗಳು ವೈದ್ಯರ ಬಳಿಗೆ ಹೋದಾಗ ನೀರಿನಿಂದ ಉಂಟಾಗುತ್ತಿರುವ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಕೊಳವೆಬಾವಿಗಳಿಗೆ ದ್ರವ ತ್ಯಾಜ್ಯ ಸೇರಿಕೊಳ್ಳುತ್ತಿದ್ದು ಅದರಿಂದಲೇ ಇಂತಹ ಸಮಸ್ಯೆಯಾಗುತ್ತಿದೆ. ಮಿಟ್ಟಗಾನಹಳ್ಳಿ ಬೆಳ್ಳಹಳ್ಳಿ ಬಂಡೆ ಹೊಸೂರಿನ ಮಕ್ಕಳು ಸೇರಿದಂತೆ ಹಲವು ನಿವಾಸಿಗಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ವೃದ್ಧರಲ್ಲಿ ಸಂಕಷ್ಟ ಹೆಚ್ಚಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬೈರೇಗೌಡ ಮಾಹಿತಿ ನೀಡಿದರು.
ಪಾಳುಬಿದ್ದ ದ್ರವತ್ಯಾಜ್ಯ ಸಂಸ್ಕರಣಾ ಘಟಕ
ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ದ್ರವ ತ್ಯಾಜ್ಯ ಸಂಸ್ಕರಣೆ ಘಟಕವನ್ನು ಯೋಜನೆಯಂತೆ ಬಿಬಿಎಂಪಿ ಸ್ಥಾಪಿಸಿದೆ. ಆದರೆ ಈ ಘಟಕ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು ಪಾಳುಬಿದ್ದ ಕಟ್ಟಡದಂತಾಗಿದೆ. ಅದರ ಸುತ್ತಮುತ್ತ ಅಳವಡಿಸಿರುವ ಪೈಪ್‌ಗಳೆಲ್ಲ ಕಿತ್ತುಹೋಗಿವೆ. ದಿನಕ್ಕೆ ಲಕ್ಷಾಂತರ ಲೀಟರ್ ದ್ರವ ತ್ಯಾಜ್ಯ ಈ ಭೂಭರ್ತಿ ಪ್ರದೇಶದಲ್ಲಿ ಉತ್ಪಾದನೆಯಾಗುತ್ತದೆ. ಅದನ್ನು ಸಂಸ್ಕರಿಸಲೆಂದೇ ಹತ್ತಾರು ಕೋಟಿ ವೆಚ್ಚದಲ್ಲಿ ದ್ರವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದೆ. ಇದು ಕಾರ್ಯನಿರ್ವಹಿಸದ್ದರಿಂದ ತಲಾ 50ಕ್ಕೂ ಹೆಚ್ಚು ಅಡಿ ಆಳದಲ್ಲಿ ನಾಲ್ಕಾರು ಹಳ್ಳಗಳಲ್ಲಿ ದ್ರವ ತ್ಯಾಜ್ಯ ತುಂಬಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.