ADVERTISEMENT

ಬೆಂಗಳೂರು: ಮನೆ, ರಸ್ತೆಗಳಲ್ಲೇ ಉಳಿದ ಕಸ

ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳು ಸ್ಥಗಿತ; ಮುಂದುವರಿದ ಮಾತುಕತೆ  

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 23:10 IST
Last Updated 13 ಮಾರ್ಚ್ 2025, 23:10 IST
ಮಿಟ್ಟ ಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಉಳಿದಿರುವ ಕಾಂಪ್ಯಾಕ್ಟರ್‌ಗಳು
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಮಿಟ್ಟ ಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಉಳಿದಿರುವ ಕಾಂಪ್ಯಾಕ್ಟರ್‌ಗಳು ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್   

ಬೆಂಗಳೂರು: ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ಹೀಗಾಗಿ, ನಗರದ ಹಲವು ಪ್ರದೇಶಗಳಲ್ಲಿ ಮನೆ ಹಾಗೂ ರಸ್ತೆಗಳಲ್ಲಿ ಕಸ ಉಳಿದುಕೊಂಡಿದೆ.

‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡಬಾರದು’ ಎಂದು ತ್ಯಾಜ್ಯ ತುಂಬಿದ ಸುಮಾರು 300 ಕಾಂಪ್ಯಾಕ್ಟರ್‌ಗಳನ್ನು ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಮಂಗಳವಾರ ಬೆಳಿಗ್ಗೆಯಿಂದ ತಡೆಹಿಡಿದಿದ್ದಾರೆ.

ಮಂಗಳವಾರದಿಂದ ಕಾಂಪ್ಯಾಕ್ಟರ್‌ಗಳು ವಾಪಸ್‌ ಬಾರದೆ ತ್ಯಾಜ್ಯ ತುಂಬಿಕೊಂಡಿರುವ ಆಟೊ ಟಿಪ್ಪರ್‌ಗಳು ನಗರದ ಕೆಲವು ಬಡಾವಣೆಗಳು ಹಾಗೂ ರಸ್ತೆಗಳಲ್ಲೇ ನಿಂತಿವೆ. ಹೀಗಾಗಿ, ಮನೆ ಮನೆಗಳಿಂದ ಗುರುವಾರ ತ್ಯಾಜ್ಯ ಸಂಗ್ರಹವಾಗಿಲ್ಲ. ಮನೆಗಳಲ್ಲೇ ಹಸಿ ತ್ಯಾಜ್ಯ ಉಳಿದಿದ್ದು, ವಾಣಿಜ್ಯ ಪ್ರದೇಶಗಳಲ್ಲಿ ಹಸಿ–ಒಣ ತ್ಯಾಜ್ಯ ರಸ್ತೆಗಳಲ್ಲೇ ಹರಡಿಕೊಂಡಿದೆ.

ADVERTISEMENT

ವಿಲೇವಾರಿಗೆ ಬಿಡೊಲ್ಲ: ‘ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಅದು ನಿಲ್ಲುವವರೆಗೂ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಿಂದ ತ್ಯಾಜ್ಯ ವಿಲೇವಾರಿ ಮಾಡಲು ಬಿಡುವುದಿಲ್ಲ’ ಎಂದು ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌. ಅಶೋಕ್‌ ತಿಳಿಸಿದರು.

‘ಮಂಗಳವಾರ ಬೆಳಿಗ್ಗೆಯಿಂದ ಕಾಂಪ್ಯಾಕ್ಟರ್‌ಗಳು ತ್ಯಾಜ್ಯ ವಿಲೇವಾರಿಯಾಗದಂತೆ ತಡೆದಿದ್ದೇವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾ ಅಧಿಕಾರಿಯವರು ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ್ದಾರೆ. ಮಾರ್ಚ್‌ 19ರಂದು ಸ್ಥಳ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಅವರು ಬಂದು ಇಲ್ಲಿನ ಪರಿಸ್ಥಿತಿ ನೋಡಲಿ, ನಮ್ಮ ಗ್ರಾಮಸ್ಥರ ಸಂಕಷ್ಟವನ್ನು ಬಗೆಹರಿಸಲಿ. ಅಲ್ಲಿಯವರೆಗೂ ನಾವು ತ್ಯಾಜ್ಯ ವಿಲೇವಾರಿಗೆ ಅವಕಾಶ ಮಾಡಿಕೊಡುವುದಿಲ್ಲ’ ಎಂದರು.

ಸಮಸ್ಯೆ ಇಲ್ಲ: ‘ನಗರದಿಂದ ತ್ಯಾಜ್ಯ ವಿಲೇವಾರಿ ಆಗುತ್ತಿದೆ. ಸದ್ಯಕ್ಕೆ ಹೆಚ್ಚಿನ ಸಮಸ್ಯೆ ಏನೂ ಆಗಿಲ್ಲ. ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯವೂ ವಿಲೇವಾರಿ ಆಗುತ್ತಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಲೋಕೇಶ್‌ ತಿಳಿಸಿದರು.

ಬಸವರಾಜ ಮಾರುಕಟ್ಟೆ ಸಮೀಪದ ಚನ್ನರಾಯಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ರಾಶಿ ಬಿದ್ದಿರುವ ಗುರುವಾರ ಮಧ್ಯಾಹ್ನ ಕಂಡುಬಂತು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌

ಮಾರ್ಚ್‌ 19ರಂದು ಪರಿಶೀಲನೆ: ಸಿಇಒ

‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಮಾರ್ಚ್‌ 19ರಂದು ಸ್ಥಳ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಬೆಂಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲತಾ ಕುಮಾರಿ ತಿಳಿಸಿದರು. ಕಣ್ಣೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಲತಾಕುಮಾರಿ ಅವರು ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿರುವ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಿಎಸ್‌ಡಬ್ಲ್ಯುಎಂಎಲ್‌ನ ಎಂಜಿನಿಯರ್‌ಗಳೂ ಸಭೆಯಲ್ಲಿ ಭಾಗವಹಿಸಿದ್ದರು.

‘ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ಸಮಸ್ಯೆ ಅರಿತು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್‌ ಅವರು ಪತ್ರ ಬರೆದು ‘ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿಯನ್ನು ಸ್ಥಗಿತಗೊಳಿಸಬೇಕು. ಸ್ಥಳೀಯ ನಿವಾಸಿಗಳ ಆರೋಗ್ಯ ಕಾಪಾಡಬೇಕು’ ಎಂದು ಮನವಿ ಮಾಡಿದ್ದರು. ಈ ಪ‍ತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮುಖ್ಯ ಕಾರ್ಯದರ್ಶಿಯವರು ವರ್ಗಾಯಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.