ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುಸ್ಲಿಂ ಸಮುದಾಯದವರು ಕುರಿಗಳ ಖರೀದಿಯಲ್ಲಿ ತೊಡಗಿದ್ದರು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಬಕ್ರೀದ್ ಹಬ್ಬದ ಅಂಗವಾಗಿ ನಗರದ ಚಾಮರಾಜಪೇಟೆಯ ಈದ್ಗಾ ಮೈದಾನ ಹಾಗೂ ಆರ್.ಟಿ. ನಗರದ ಮುಖ್ಯರಸ್ತೆಯಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಜೋರಾಗಿದೆ. ಈ ಬಾರಿ ನಾಟಿ ಮತ್ತು ಬಾಗಲಕೋಟೆ ಜಿಲ್ಲೆಯ ಅಮೀನಗಡ ತಳಿಯ ಕುರಿಗಳಿಗೆ ಬೇಡಿಕೆ ಹೆಚ್ಚಿದೆ.
ಬಕ್ರೀದ್ ಹಬ್ಬಕ್ಕೆ ಒಂದು ದಿನ ಬಾಕಿ ಇದ್ದು, ಕುರಿ ವ್ಯಾಪಾರ ಜೋರಾಗಿದೆ. ರಾಜ್ಯದ ನಾನಾ ಜಿಲ್ಲೆಗಳಿಂದ ವಿವಿಧ ತಳಿಯ ಕುರಿ ಹಾಗೂ ಮೇಕೆಗಳ ಹಿಂಡು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬೀಡುಬಿಟ್ಟಿದೆ. ಶನಿವಾರ ನಡೆಯುವ ಬಕ್ರೀದ್ ಹಬ್ಬಕ್ಕೂ ಮುನ್ನವೇ ಮುಸ್ಲಿಂ ಸಮುದಾಯದವರು ಕುರಿಗಳನ್ನು ಖರೀದಿಸುತ್ತಾರೆ. ಹಾಗಾಗಿ ಸಂತೆಯಲ್ಲಿ ವಿವಿಧ ತಳಿಯ ಸಾವಿರಾರು ಕುರಿಗಳು ಮಾರಾಟಕ್ಕಿದ್ದವು. ಕುರಿಗಳನ್ನು ಖರೀದಿಸಲು ಗ್ರಾಹಕರು ಗುಂಪು ಗುಂಪಾಗಿ ಬರುತ್ತಿದ್ದರು.
ಆರ್.ಟಿ. ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ನೂರಾರು ಜನ ವ್ಯಾಪಾರಿಗಳು ಕುರಿ, ಮೇಕೆ ಹಿಂಡುಗಳ ಜೊತೆಗೆ ಒಂದು ವಾರದಿಂದ ಠಿಕಾಣಿ ಹೂಡಿದ್ದಾರೆ. ಇಲ್ಲಿ ಮಧ್ಯಾಹ್ನ 1ಕ್ಕೆ ಪ್ರಾರಂಭವಾಗುವ ವ್ಯಾಪಾರ ಮಧ್ಯರಾತ್ರಿಯವರೆಗೆ ನಡೆಯುತ್ತದೆ.
‘ಬಂಡೂರು, ಮೌಳಿ, ಶಿರೋಹಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ತಮಿಳುನಾಡು ಸೇರಿದಂತೆ ವಿವಿಧ ತಳಿಯ ಕುರಿಗಳು ಇಲ್ಲಿವೆ. ಬಂಡೂರು ಕುರಿಗಳು ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹50 ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರುಗಳು ಕನಿಷ್ಠ ₹20 ಸಾವಿರದಿಂದ ಗರಿಷ್ಠ ₹1.50 ಲಕ್ಷದವರೆಗೂ ಬಿಕರಿಯಾಗಿವೆ’ ಎಂದು ದಾವಣಗೆರೆಯ ವ್ಯಾಪಾರಿ ನಿಸಾರ್ ಅಹ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಮೀನಗಡ ತಳಿಗೆ ಸೇರಿದ 25ಕ್ಕೂ ಹೆಚ್ಚು ಟಗರುಗಳನ್ನು ದಾವಣಗೆರೆಯಿಂದ ತಂದಿದ್ದೇನೆ. ಈಗಾಗಲೇ 15 ಟಗರುಗಳು ಮಾರಾಟವಾಗಿವೆ. ರಂಜಾನ್, ಬಕ್ರೀದ್ ಸಂದರ್ಭದಲ್ಲಿ ಮಾತ್ರ ಕುರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಗಾತ್ರ, ತೂಕದ ಆಧಾರದಲ್ಲಿ ಕುರಿಗಳ ಖರೀದಿ ನಡೆಯುತ್ತದೆ. ಹೋದವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಕುರಿ, ಮೇಕೆಗೆ ಹೆಚ್ಚು ಬೇಡಿಕೆ ಇದ್ದು, ಉತ್ತಮ ಬೆಲೆಗೆ ಮಾರಾಟವಾಗುತ್ತಿವೆ’ ಎಂದರು.
ಉದ್ದ ಕಿವಿಯ ಹೋತಕ್ಕೆ ₹65 ಸಾವಿರ!
ಆರ್.ಟಿ. ನಗರದ ಮುಖ್ಯರಸ್ತೆಯಲ್ಲಿ ಮಾರಾಟಕ್ಕೆ ತಂದಿದ್ದ ಉದ್ದ ಕಿವಿ ಇರುವ ಹೋತವೊಂದು ನೋಡಗರನ್ನು ಸೆಳೆಯಿತು. ‘ಇದರ ಬೆಲೆ ₹65 ಸಾವಿರ ಇದೆ. ಈ ಹೋತ 60 ಕೆ.ಜಿ. ತೂಕ ಇದೆ. ಅದಕ್ಕೆ ಇದರ ಬೆಲೆಯೂ ಹೆಚ್ಚು. ಎರಡು ವರ್ಷಗಳಿಂದ ಇದನ್ನು ಸಾಕುತ್ತಿದ್ದೇನೆ. ನಾನು ನಿಗದಿಪಡಿಸಿರುವ ಬೆಲೆ ಬಂದರೆ ಮಾತ್ರ ಮಾರಾಟ ಮಾಡುತ್ತೇನೆ’ ಎಂದು ದೇವನಹಳ್ಳಿ ಗೋವಿಂದರಾಜು ಹೇಳಿದರು.
‘ನಾಟಿ ಕುರಿಗೆ ಭಾರಿ ಬೇಡಿಕೆ’
‘ಅಮೀನಗಡದ ಟಗರುಗಳ ಜತೆಗೆ ಗ್ರಾಮೀಣ ಭಾಗದಲ್ಲಿ ಸಾಕಿರುವ ನಾಟಿ ಟಗರುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಸಂತೆಯಲ್ಲಿ ಎಲ್ಲಿ ನೋಡಿದರೂ ಗ್ರಾಮೀಣ ಭಾಗದ ನಾಟಿ ಟಗರು ಕುರಿ ಮೇಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಬನ್ನೂರು ಬಂಡೂರು ಕುರಿಗಳೂ ಹೆಚ್ಚಾಗಿ ಮಾರಾಟವಾಗುತ್ತಿವೆ’ ಎನ್ನುತ್ತಾರೆ ಶಿರಾದಿಂದ ಬಂದಿರುವ ವ್ಯಾಪಾರಿ ಸುಹೇಲ್.
ಚಾಮರಾಜಪೇಟೆಯ ಮುಖ್ಯರಸ್ತೆಯಲ್ಲಿ ಹೋತವೊಂದು ಎರಡು ಕಾಲುಗಳ ಮೇಲೆ ನಿಂತಿತ್ತು (ಎಡಚಿತ್ರ) ಈದ್ಗಾ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುಸ್ಲಿಂ ಸಮುದಾಯದವರು ಕುರಿಗಳ ಖರೀದಿಯಲ್ಲಿ ತೊಡಗಿದ್ದರು
ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.