ಬೆಂಗಳೂರು: ‘ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿಗೆ ಸಂಬಂಧಿಸಿದಂತೆ ಅಲೆಮಾರಿ ಸಮುದಾಯಗಳಿಗಾದ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
‘ದಲಿತ ಸಮುದಾಯಗಳಿಗೆ ಒಳಮೀಸಲಾತಿ ಒದಗಿಸುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ವರದಿಯನ್ನು ಒಪ್ಪಿ, ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೊಳಿಸುತ್ತಿರುವುದು ಅಭಿನಂದನೀಯ ಕ್ರಮ. ಎಡಗೈ ದಲಿತ ಸಮುದಾಯವು ಮೂರು ದಶಕಗಳಿಂದ ಒಳಮೀಸಲಾತಿಗಾಗಿ ನಡೆಸುತ್ತ ಬಂದ ಹೋರಾಟಕ್ಕೆ ಕಡೆಗೂ ಜಯವಾಗಿದ್ದು, ನ್ಯಾಯ ಸಿಕ್ಕಿದೆ. ಬಲಗೈ ದಲಿತ ಸಮುದಾಯ ಮತ್ತು ಸ್ಪೃಶ್ಯ ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸಮತೋಲನದ ಪ್ರಯತ್ನ ಮಾಡಲಾಗಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಒದಗಿಸಿಲ್ಲ ಎಂಬ ಅಂಶ ಮುನ್ನೆಲೆಗೆ ಬಂದಿದೆ’ ಎಂದು ತಿಳಿಸಿದ್ದಾರೆ.
‘ಅಲೆಮಾರಿ ಸಮುದಾಯಗಳು ಬೇರೆ ಶೋಷಿತ ಸಮುದಾಯಗಳಿಗಿಂತ ಭಿನ್ನವಾದ ಜೀವನ ವಿಧಾನವನ್ನು ಅಳವಡಿಸಿಕೊಂಡಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೇರೆ ಯಾವುದೇ ಶೋಷಿತ ಸಮುದಾಯದ ಜತೆಗೆ ಸ್ಪರ್ಧೆ ಮಾಡಲಾಗದಂಥ ಸ್ಥಿತಿಯಲ್ಲಿವೆ. ಈ ವಾಸ್ತವವನ್ನು ಪರಿಗಣಿಸಿಯೇ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಒಳಮೀಸಲಾತಿಗೆ ಶಿಫಾರಸು ಮಾಡಿತ್ತು’ ಎಂದಿದ್ದಾರೆ.
‘ಸಾಮಾಜಿಕ ನ್ಯಾಯಕ್ಕೆ ಬದ್ಧರಾದವರೆಂದೇ ಹೆಸರಾದ ತಾವು, ಅಲೆಮಾರಿಗಳಿಗಾದ ಅನ್ಯಾಯವನ್ನು ಸರಿಪಡಿಸಲು ಪರ್ಯಾಯ ಪರಿಹಾರ ಮಾರ್ಗಗಳನ್ನು ಹುಡುಕಬೇಕು. ಆ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಈ ಸಂಬಂಧ ಅಲೆಮಾರಿ ಸಂಘಟನೆಗಳ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.