ADVERTISEMENT

35 ವರ್ಷದೊಳಗೆ ಮಕ್ಕಳನ್ನು ಹೊಂದುವುದು ಸೂಕ್ತ: ವೈದ್ಯರ ಅಭಿಪ್ರಾಯ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 21:54 IST
Last Updated 6 ಮಾರ್ಚ್ 2021, 21:54 IST
ಕಾರ್ಯಕ್ರಮದಲ್ಲಿ (ಎಡದಿಂದ) ಮಣಿಪಾಲ್‌ ಆಸ್ಪತ್ರೆಯ ವೈದ್ಯೆ ಡಾ.ಕ್ಷಿತಿಜಾ, ಖಾಸಗಿ ಕಂಪನಿ ಉದ್ಯೋಗಿ ದೀಪ್ತಿ ವಿಜಯನ್‌, ಕ್ರೈಸ್ಟ್‌ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ರಾವ್‌, ಡಾ.ಗಾಯತ್ರಿ ಕಾರ್ತಿಕ್‌, ನಟಿ ಮಾಳವಿಕಾ ಅವಿನಾಶ್‌, ಡಾ.ಮೀನಾ ಮುತ್ತಯ್ಯ, ಡಾ.ಹೇಮಾನಂದಿನಿ ಜಯರಾಮನ್‌ ಹಾಗೂ ಡಾ.ಆರತಿ ರಾಮರಾವ್‌ ಭಾಗವಹಿಸಿದ್ದರು  –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಮಣಿಪಾಲ್‌ ಆಸ್ಪತ್ರೆಯ ವೈದ್ಯೆ ಡಾ.ಕ್ಷಿತಿಜಾ, ಖಾಸಗಿ ಕಂಪನಿ ಉದ್ಯೋಗಿ ದೀಪ್ತಿ ವಿಜಯನ್‌, ಕ್ರೈಸ್ಟ್‌ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ರಾವ್‌, ಡಾ.ಗಾಯತ್ರಿ ಕಾರ್ತಿಕ್‌, ನಟಿ ಮಾಳವಿಕಾ ಅವಿನಾಶ್‌, ಡಾ.ಮೀನಾ ಮುತ್ತಯ್ಯ, ಡಾ.ಹೇಮಾನಂದಿನಿ ಜಯರಾಮನ್‌ ಹಾಗೂ ಡಾ.ಆರತಿ ರಾಮರಾವ್‌ ಭಾಗವಹಿಸಿದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘25ರಿಂದ 35ವರ್ಷ ದೊಳಗೆ ಮಕ್ಕಳನ್ನು ಹೊಂದುವುದು ಸೂಕ್ತ. 35 ದಾಟಿದ ಮೇಲೆ ಮಹಿಳೆ ಯರಲ್ಲಿ ಫಲವತ್ತತೆಯ ಪ್ರಮಾಣ ಕುಸಿಯುತ್ತಾ ಹೋಗುತ್ತದೆ. ಆಗ ಗರ್ಭ ಧರಿಸಬಹುದಾದರೂ ಸಣ್ಣ ಪುಟ್ಟ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ’ ಎಂದು ಮಣಿಪಾಲ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಮೀನಾ ಮುತ್ತಯ್ಯ ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’, ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಆಯೋ ಜಿಸಿದ್ದ ‘ಬಲಿಷ್ಠ ಮಹಿಳೆ–ಬಲಿಷ್ಠ ಪ್ರಪಂಚ’ ಕಾರ್ಯಕ್ರಮ ಹಾಗೂ ಮಹಿಳೆ ಯರ ಆರೋಗ್ಯ ಸಮಸ್ಯೆಗಳ ಕುರಿತ ವೈದ್ಯಕೀಯ ಚರ್ಚೆಯಲ್ಲಿ ಅವರು ಮಾತನಾಡಿದರು.

ಐಟಿ ಉದ್ಯೋಗಿ ಇಂಫಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೀನಾ ಮುತ್ತಯ್ಯ, ‘35ರ ನಂತರ ಅನೇಕರಲ್ಲಿ ಸಕ್ಕರೆ ಕಾಯಿಲೆ ಹಾಗೂ ಇತರ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಗರ್ಭಧರಿಸಿದರೆ ಜನಿಸುವ ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ 35 ಮೀರುವುದರೊಳಗೆ ಮಕ್ಕಳನ್ನು ಪಡೆದು ಬಳಿಕ ಉದ್ಯೋಗದತ್ತ ಗಮನ ಹರಿಸುವುದು ಉತ್ತಮ’ ಎಂದು ಸಲಹೆ ನೀಡಿದರು.

ADVERTISEMENT

ಡಾ.ಗಾಯತ್ರಿ ಕಾರ್ತಿಕ್‌ ‘ಫೈಬ್ರಾಯ್ಡ್‌ ರೋಗವು ಯಾರನ್ನು ಬೇಕಾದರೂ ಬಾಧಿಸಬಹುದು. ಈ ಕಾಯಿಲೆ ಇರುವವರು ಮುಟ್ಟಿನ ಅವಧಿಯಲ್ಲಿ ವಿಪರೀತ ನೋವು ಅನುಭವಿಸುತ್ತಾರೆ. ಅತಿಯಾದ ರಕ್ತಸ್ರಾವವೂ ಆಗುತ್ತದೆ. ಇದು ಬಂಜೆತನಕ್ಕೂ ಎಡೆಮಾಡಿಕೊಡಬಹುದು. ನಿಯಮಿತ ಪರೀಕ್ಷೆ ಮೂಲಕ ಈ ಕಾಯಿಲೆಯನ್ನು ಮೂಲದಲ್ಲೇ ಪತ್ತೆಮಾಡಿ ಚಿಕಿತ್ಸೆ ನೀಡಬಹುದು. ಅಲ್ಟ್ರಾಸೌಂಡ್‌, ಪಾಪ್‌ಸ್ಮಿಯರ್‌ ಪರೀಕ್ಷೆಗಳಿಗೆ ಒಳಪಡುವ ಮೂಲಕ ಗರ್ಭಕೋಶದ ಕಾಯಿಲೆಗೂ ಕಡಿವಾಣ ಹಾಕಬಹುದು’ ಎಂದರು.

ಫೈಬ್ರಾಯ್ಡ್‌ ರೋಗದಿಂದ ಗುಣಮುಖರಾಗಿರುವ ದೀಪ್ತಿ ಅವರು ತಮ್ಮ ಅನುಭವ ಹಂಚಿಕೊಂಡರು. ‘ನನಗೆ ಫೈಬ್ರಾಯ್ಡ್‌ ಇರುವುದು ಪರೀಕ್ಷೆಯಿಂದ ಖಾತರಿಯಾಗಿತ್ತು. ಇದರಿಂದ ಪಾರಾಗಲು ಶಸ್ತ್ರಚಿಕಿತ್ಸೆಯೊಂದೇ ಮಾರ್ಗ ಎಂದು ವೈದ್ಯರು ಹೇಳಿದರು. ಹೀಗಾಗಿ ಡಾ.ಗಾಯತ್ರಿ ಅವರನ್ನು ಭೇಟಿಯಾದೆ. ಅವರ ಸಲಹೆಯಂತೆ ‘ರೋಬೊಟಿಕ್‌’ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ. ಈಗ ನೃತ್ಯ, ಕೆಲಸ, ಯೋಗ ಹೀಗೆ ಎಲ್ಲಾ ಚಟುವಟಿಕೆಗಳಲ್ಲೂ ಮೊದಲಿನಂತೆಯೇ ತೊಡಗಿಕೊಂಡಿದ್ದೇನೆ’ ಎಂದರು.

‘ಈಗಿನ ಮಕ್ಕಳು ಬೇಗನೆ ಋತುಮತಿಗಳಾಗುತ್ತಾರೆ. ಹದಿಹರೆಯದವರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚು. ಅಂಗ ಸೌಷ್ಠವ ಕಾಪಾಡಿಕೊಳ್ಳುವ ಉದ್ದೇಶದಿಂದ ಕೆಲವರು ವಿಪರೀತ ವ್ಯಾಯಾಮ ಮಾಡುತ್ತಾರೆ. ಇದರಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ. ಈಗಿನ ಮಕ್ಕಳು ಮೊಬೈಲ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ಇದ ರಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ತಾಯಂದಿರಾಗುವ ಅವರಿಗೆ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಡಾ.ಹೇಮಾ ನಂದಿನಿ ಜಯರಾಮನ್‌ ತಿಳಿಸಿದರು.

‘ದಪ್ಪ ಆಗಿಬಿಡುತ್ತೇನೆ ಎಂಬ ಭಯದಿಂದ ಕೆಲವರು ಸರಿಯಾಗಿ ಊಟ ಮಾಡುವುದಿಲ್ಲ. ಇದು ಸರಿಯಲ್ಲ. ನಮ್ಮ ದೇಹಕ್ಕೆ ನಿತ್ಯವೂ ಅಗತ್ಯ ಪ್ರಮಾಣದ ಪೋಷಕಾಂಶಗಳು ಬೇಕಿರುತ್ತದೆ. ಆಹಾರದ ಮೂಲಕ ಅದನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಣಿಪಾಲ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಪ್‌ ಜೋಶ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.