
ಕೆ.ವಿ.ಜಯರಾಂ ರಸ್ತೆಯ ಪಕ್ಕದಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುವುದು
ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಜಿಕೆವಿಕೆ ಕ್ರಾಸ್ ಮೂಲಕ ಜಕ್ಕೂರು ಕಡೆಗೆ ಹಾದುಹೋಗುವ ಕೆ.ವಿ.ಜಯರಾಂ ರಸ್ತೆಯ ಪಕ್ಕದಲ್ಲಿ (ಶನೈಶ್ಚರಸ್ವಾಮಿ ದೇವಾಲಯದ ಸಮೀಪ) ಕೋಳಿ ಸಾಗಾಣಿಕೆ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ಜಿಕೆವಿಕೆ ಕ್ರಾಸ್‌ನಿಂದ ಜಕ್ಕೂರು, ಹೆಗಡೆ ನಗರದ ಮೂಲಕ ಕೆ.ಆರ್. ಪುರ ಹಾಗೂ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜಕ್ಕೂರು ಬಡಾವಣೆಯ ಏರೋಡ್ರೋಮ್ ಕಾಂಪೌಂಡ್‌ಗೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿ ಕೋಳಿ ಸಾಗಾಣಿಕೆ ವಾಹನಗಳೂ ಸೇರಿದಂತೆ ಹಲವು ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರ ಸಾಧ್ಯವಾಗದೆ ಪ್ರಯಾಸದಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘ಪೀಕ್-ಅವರ್’ನಲ್ಲಿ ವಾಹನಗಳು ಮಂದಗತಿಯಲ್ಲಿ ಚಲಿಸುತ್ತವೆ. ರಸ್ತೆಯ ಪಕ್ಕದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಅಪಘಾತಗಳೂ ಆಗುತ್ತಿವೆ. ಸರ್ಕಾರದ ಹಲವು ಹಿರಿಯ ಅಧಿಕಾರಿಗಳೂ ಸೇರಿದಂತೆ ಸಂಚಾರ ಪೊಲೀಸರು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸಿದರೂ ವಾಹನಗಳ ತೆರವಿಗೆ ಕ್ರಮ ಕೈಗೊಂಡಿಲ್ಲ’ ಎಂದು ಜಕ್ಕೂರು ಗ್ರಾಮದ ನಿವಾಸಿ ನಾರಾಯಣಪ್ಪ ದೂರಿದರು.
ಜಿಕೆವಿಕೆ ಕ್ರಾಸ್‌ನಿಂದ ಜಕ್ಕೂರು ಬಡಾವಣೆಯವರೆಗೆ ಹಾಗೂ ಶ್ರೀರಾಮ ವಿದ್ಯಾಲಯದ ಕಡೆಗೆ ತೆರಳುವ ರಸ್ತೆಯಲ್ಲೂ ಎರಡೂ ಕಡೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗಿರುತ್ತದೆ’ ಎಂದು ಸ್ಥಳೀಯ ನಿವಾಸಿ ಬೈಲನರಸಯ್ಯ ಹೇಳಿದರು.
‘ರಸ್ತೆಯಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವವರ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದೆ. ಈಗ ಮತ್ತೆ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರೆ ಪರಿಶೀಲಿಸಿ, ತಕ್ಷಣ ತೆರವುಗೊಳಿಸುವುದರ ಜೊತೆಗೆ ದೂರು ದಾಖಲಿಸಲಾಗುವುದು’ ಎಂದು ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಧುಸೂದನ್ ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.