
ಮಲ್ಲೇಶ್ವರಂನಲ್ಲಿ ಆಯೋಜಿಸಿದ ಒಂಬತ್ತನೇ ವರ್ಷದ ರೈತ ಸ್ನೇಹಿ ಕಡಲೆಕಾಯಿ ಪರಿಷೆಯು ಅದ್ದೂರಿಯಾಗಿ ಜರುಗಿತ್ತು. ನಿನ್ನೆ ( ಭಾನುವಾರ) ದೇವಸ್ಥಾನದ ಆವರಣದಲ್ಲಿ ನಡೆದ ‘ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ನಟಿ ಸುಧಾರಾಣಿ ಅವರು ಭಾಗಿಯಾಗಿದ್ದರು.
ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿರುವ ನಂದಿ, ಗಂಗಮ್ಮದೇವಿ ದೇವಾಲಯಯವು ಕಡಲೆಕಾಯಿ ಅಲಂಕಾರದಿಂದ ಕಂಗೊಳಿಸುತಿದ್ದರೆ, ದೇವಸ್ಥಾನದ ರಥ ಬೀದಿಯಲ್ಲಿ ಕಡಲೆಕಾಯಿಯನ್ನು ಚೌಕಾಸಿ ಮಾಡಿಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದರು. ರಸ್ತೆಯುದ್ದಕ್ಕೂ ಕಡಲೆಕಾಯಿ, ಗೃಹಯೋಪಯೋಗಿ ವಸ್ತು, ಆಟಿಕೆ, ತಿಂಡಿ ತಿನಿಸು, ಬಟ್ಟೆ, ಬ್ಯಾಗ್, ಅಲಂಕಾರಿಕ ವಸ್ತುಗಳಿಂದ ಗ್ರಾಹಕರನ್ನು ಗಮನ ಸೆಳೆಯುತ್ತಿದ್ದವು.
ಪರಿಷೆಯಲ್ಲಿ ಮೂರು ವಿಧದ ಹಸಿ, ಹುರಿದ, ಬೇಯಿಸಿದ ಕಡಲೆಕಾಯಿಗಳನ್ನು ಸೇರು ಅಳತೆಯಲ್ಲಿ ಮಾರಾಟ ಮಾಡುತ್ತಿದ್ದರು. ಶೇಂಗಾವನ್ನು ಸೇರು ಅಳತೆಯಲ್ಲಿ ಅಂದರೆ, 1 (ಸೇರು) ₹50 ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು.
ಪರಿಷೆಯಲ್ಲಿ ವ್ಯಾಪಾರಸ್ಥರು ಹೇಳಿದ ಬೆಲೆಗೆ ಕಡಲೆಕಾಯಿ ತೆಗೆದುಕೊಳ್ಳದೆ ಚೌಕಾಸಿ ಮಾಡುತ್ತಿದ್ದ ಗ್ರಾಹಕರು ಹೆಚ್ಚು ಇದ್ದರು. ಗ್ರಾಹಕರ ಚೌಕಾಸಿ ನಡುವೆಯೂ ಪರಿಷೆಯಲ್ಲಿ ವ್ಯಾಪಾರ ಮಾಡುತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿತ್ತು. ಗೃಹಯೋಪಯೋಗಿ ವಸ್ತು, ಆಟಿಕೆ, ತಿಂಡಿ ತಿನಿಸು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಅನೇಕ ಗ್ರಾಹಕರು ಗೊಣಗುತ್ತಿದ್ದರು.
ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು ಸೇರಿದಂತೆ ಅನೇಕ ಕಡೆಯ ರೈತರು ಪರಿಷೆಯಲ್ಲಿ ಶೆಂಗಾ ಮಾರಾಟ ಮಾಡುತ್ತಿದ್ದರು.
ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ನ.8ರಂದು ಮುಜುರಾಯಿ ಇಲಾಖೆಯ ಸಚಿವ ಚಾಲನೆ ನೀಡಿದ್ದರು. ಮೂರು ದಿನದ ಪರಿಷೆ ಇಂದು (ಸೋಮವಾರ) ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.