ADVERTISEMENT

‘ಆಡಳಿತಕ್ಕೆ ತಾಯ್ತನದ ಸ್ಪರ್ಶ ಬೇಕು: ಲೇಖಕಿ ಬಿ.ಟಿ.ಲಲಿತಾ ನಾಯಕ್

ಲೇಖಕಿ ಬಿ.ಟಿ.ಲಲಿತಾ ನಾಯಕ್ ಅಭಿಮತ *ಇಂದಿರಾ ರತ್ನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:16 IST
Last Updated 26 ನವೆಂಬರ್ 2022, 19:16 IST
ಬಿ.ಟಿ. ಲಲಿತಾ ನಾಯಕ್ ಅವರಿಗೆ ಶಶಿಕಲಾ ವೀರಯ್ಯಸ್ವಾಮಿ ಅವರು ‘ಇಂದಿರಾ ರತ್ನ ದತ್ತಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ, ಖಜಾಂಜಿ ಮಂಜುಳಾ ಶಿವಾನಂದ ಹಾಗೂ ಸಹಕಾರ್ಯದರ್ಶಿ ಮಂಜುಳಾ ಬಿ.ವಿ. ಇದ್ದಾರೆ. – ಪ್ರಜಾವಾಣಿ ಚಿತ್ರ
ಬಿ.ಟಿ. ಲಲಿತಾ ನಾಯಕ್ ಅವರಿಗೆ ಶಶಿಕಲಾ ವೀರಯ್ಯಸ್ವಾಮಿ ಅವರು ‘ಇಂದಿರಾ ರತ್ನ ದತ್ತಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿದರು. ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ, ಖಜಾಂಜಿ ಮಂಜುಳಾ ಶಿವಾನಂದ ಹಾಗೂ ಸಹಕಾರ್ಯದರ್ಶಿ ಮಂಜುಳಾ ಬಿ.ವಿ. ಇದ್ದಾರೆ. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜದಲ್ಲಿನ ಸಮಸ್ಯೆಗಳು ಸರಿಹೋಗಲು ಆಡಳಿತದಲ್ಲಿ ತಾಯ್ತನದ ಸ್ಪರ್ಶ ಇರಬೇಕು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರುವಂತಾಗಬೇಕು’ ಎಂದು ಲೇಖಕಿ ಬಿ.ಟಿ. ಲಲಿತಾನಾಯಕ್ ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಇಂದಿರಾ ರತ್ನ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು. ‘ನಮ್ಮ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಲೇಖಕಿಯರು ಚಿಂತಿಸಿ, ಸರ್ಕಾರದ ಗಮನಕ್ಕೆ ತರಬೇಕು. ಈಗ ಬಣ್ಣಗಳ ಮೇಲೆ ರಾಜಕೀಯವಾಗುತ್ತಿದೆ. ಬಿಳಿಯ ಬಣ್ಣವೇ ಶ್ರೇಷ್ಠ ಎಂಬಂತಾಗಿದೆ. ಬಿಳಿಯ ಬಣ್ಣ ಶುಭ್ರತೆಯ ಸಂಕೇತ. ಇದನ್ನು ನಾವು ಅರಿಯಬೇಕು. ಕೌದಿಯಂತಹ ಬಣ್ಣ ಬಣ್ಣಗಳಿಂದ ತುಂಬಿದ ದೇಶ ನಮ್ಮದಾಗಬೇಕು’ ಎಂದು ಹೇಳಿದರು.

‘ಇಂದಿರಾ ಮತ್ತು ರತ್ನ ಇಬ್ಬರು ತಂಗಿಯರ ಹೆಸರಿನಲ್ಲಿ ಒಬ್ಬ ಅಣ್ಣ ಪ್ರಶಸ್ತಿ ಇಟ್ಟಿರುವುದು ನಿಜಕ್ಕೂ ಆಶ್ಚರ್ಯ. ನಾನು ಕೂಡ ಗತಿಸಿಹೋದ ತಂಗಿ ಕುಮುದಾ ನಾಯಕ್ ಹೆಸರಿನಲ್ಲಿ ಲೇಖಕಿಯರ ಸಂಘದಲ್ಲಿ ಪ್ರಶಸ್ತಿ ಇಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ಕವಯತ್ರಿ ಶಶಿಕಲಾ ವೀರಯ್ಯಸ್ವಾಮಿ, ‘ಸಾಹಿತಿಗಳು ಯಾವಾಗಲೂ ವಿರೋಧ ಪಕ್ಷದ ನಾಯಕರ ಹಾಗಿರಬೇಕು. ಆಡಳಿತ ಪಕ್ಷದ ನ್ಯೂನತೆಗಳನ್ನು ಎತ್ತಿ ತೋರಿಸಿ, ಅವರು ಸರಿದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು. ತಾಯ್ತನ, ಸಾಮಾಜಿಕ ಪ್ರಜ್ಞೆ, ಸಮಾಜಮುಖಿಯಾದ ವಿಷಯಗಳನ್ನು ಎತ್ತಿ ಬರೆಯಬೇಕು’ ಎಂದರು.

‘ಕವಿತೆ ಬರೆಯುವುದು ಸುಲಭದ ಕೆಲಸವಲ್ಲ. ಅದರಲ್ಲಿ ನಮ್ಮನ್ನೂ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಕವಿತೆಗಳು ಹೊರಬರಲು ಸಾಧ್ಯ. ಕನ್ನಡ ಮಹಿಳಾ ಕವಿಗಳ ಸತ್ವ ನೋಡುವಾಗ ಮಹಿಳೆಯರ ಮೇಲಿನ ದೌರ್ಜನ್ಯ ಎದ್ದುಕಾಣುತ್ತದೆ. ಇದು ಎಲ್ಲ ನೆಲದಲ್ಲೂ ಆಗಿದೆ. ಗ್ರೀಕ್, ಜರ್ಮನ್, ರೋಮ್, ಪಂಜಾಬಿ ಕವಯಿತ್ರಿಯರನ್ನು ಉದಾಹರಿಸಿದರು’ ಎಂದು ತಿಳಿಸಿದರು.

ಜನಪರ ಚಿಂತನೆ:ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ‘ಕನ್ನಡ ಪರ ಚಟುವಟಿಕೆ, ಹೋರಾಟ ಮಾಡಿದವರಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಇಂದಿರಾ ರತ್ನ ಪ್ರಶಸ್ತಿ ಸ್ಥಾಪಿಸಿದ ತುಮಕೂರಿನ ರಾಜನ್ ಅವರ ಆಸೆಯಾಗಿತ್ತು. ಬಿ.ಟಿ. ಲಲಿತಾ ನಾಯಕ್ ಅವರಜನಪರ ಚಿಂತನೆ ಮತ್ತು ಕಾಳಜಿಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಪದ್ಮಿನಿ ನಾಗರಾಜ್, ಕೃಷ್ಣಾಬಾಯಿ ಹಾಗಲವಾಡಿ, ಸುಜಾತಾ ವಿಶ್ವನಾಥ್, ಸುಜಾತಾ ಕೆ., ವಿಶಾಲಾ ಆರಾಧ್ಯ, ರಾಜಶ್ರೀ ಕಿಶೋರ್ ಸೇರಿ ಹಲವು ಕವಯತ್ರಿಯರು ತಮ್ಮ ಕವಿತೆಗಳನ್ನು ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.