ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ನೌಕರರ ಪಿಂಚಣಿ ಹೊರೆಯನ್ನು ಇಷ್ಟು ವರ್ಷ ಸರ್ಕಾರವೇ ಭರಿಸುತ್ತಿತ್ತು. 2021ರಿಂದ ಪೂರ್ವಾನ್ವಯ ಆಗುವಂತೆ ಗ್ರಾಹಕರ ಮೇಲೆ ವರ್ಗಾಯಿಸುವುದು ಕಾನೂನುಬಾಹಿರ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ವಾದಿಸಿವೆ.
ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಪರಿಷ್ಕರಣೆಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಕೆಯಾಗಿರುವ ಪ್ರಸ್ತಾವಗಳ ಕುರಿತು ಸಾರ್ವಜನಿಕ ಅಹವಾಲುಗಳ ವಿಚಾರಣೆ ಸೋಮವಾರ ನಡೆಯಿತು. ಈ ವೇಳೆ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಹಾಸಂಸ್ಥೆ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ತಮ್ಮ ಆಕ್ಷೇಪಣೆಗಳನ್ನು ಮಂಡಿಸಿದವು.
‘1999ರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವನ್ನು (ಕೆಪಿಟಿಸಿಎಲ್) ವಿಭಜಿಸಿದಾಗ ರಾಜ್ಯ ಸರ್ಕಾರ ವಿದ್ಯುತ್ ನೌಕರರ ಪಿಂಚಣಿಯನ್ನು ತಾನೇ ಭರಿಸುವುದಾಗಿ ಲಿಖಿತ ಒಪ್ಪಂದ ಮಾಡಿಕೊಂಡಿತ್ತು. 2021ರವರೆಗೆ ಇದು ಮುಂದುವರಿಯಿತು. ಸರ್ಕಾರ ಈಗ ತನ್ನ ಹೊರೆಯನ್ನು ಜನರ ಮೇಲೆ ವರ್ಗಾಯಿಸಲು ತೀರ್ಮಾನಿಸಿದೆ. ಪಿಂಚಣಿ ಸವಲತ್ತು ಮೊದಲಿನಿಂದಲೂ ಗ್ರಾಹಕರು ನೀಡುವ ವಿದ್ಯುತ್ ದರದಲ್ಲಿ ಸೇರ್ಪಡೆಗೊಂಡಿಲ್ಲ. ಈಗ ಒಮ್ಮೆಲೆ ₹10 ಸಾವಿರ ಕೋಟಿಯಷ್ಟು ಮೊತ್ತದ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ತೀರ್ಮಾನಿಸಿದೆ. ಇದರಿಂದ ಗ್ರಾಹಕರು ಪ್ರತಿ ವರ್ಷ ₹2 ಸಾವಿರ ಕೋಟಿಯಿಂದ ₹3 ಸಾವಿರ ಕೋಟಿವರೆಗೆ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಸರ್ಕಾರ ಪಾವತಿಸಿಬೇಕಾದ ಪಿಂಚಣಿ ಮೊತ್ತದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳು ಕೆಇಆರ್‌ಸಿ ಮುಂದೆ ಆಕ್ಷೇಪಣೆ ಸಲ್ಲಿಸಿದವು.
ರಾಜ್ಯ ಸರ್ಕಾರ ವಿದ್ಯುತ್ ಬಳಕೆ ಮೇಲೆ ಶೇ 9ರಷ್ಟು ತೆರಿಗೆ ಸಂಗ್ರಹಿಸುತ್ತಿದೆ. ಅದನ್ನೇ ನೌಕರರ ಪಿಂಚಣಿಗೆ ನೀಡಲಿ ಎಂದು ಸಂಘಟನೆಗಳು ಒತ್ತಾಯಿಸಿವೆ.
ಸಾರ್ವಜನಿಕ ವಿಚಾರಣೆ ರಾಜ್ಯದಾದ್ಯಂತ ನಡೆಯಲಿದ್ದು, ಏಪ್ರಿಲ್ 1ರಂದು ಹೊಸ ದರವನ್ನು ಕೆಇಆರ್‌ಸಿ ಪ್ರಕಟಿಸಬೇಕಿದೆ.
ಪ್ರತಿ ವರ್ಗದ ಗ್ರಾಹಕರಿಗೂ ವಿದ್ಯುತ್ ಸರಬರಾಜು ದರವನ್ನು ನಿಗದಿಪಡಿಸಿ, ಅದರ ಮೇಲೆ ಇಂದಿನ ದರ ಏರಿಕೆಯನ್ನು ನಿಗದಿಪಡಿಸಬೇಕೆಂದು ನಿಯಮ ಹೇಳುತ್ತದೆ. ಅದರ ಪಾಲನೆ ಆಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್, ಸದಸ್ಯರಾದ ಜಗದೀಶ್ ಮತ್ತು ಜಾವೇದ್ ಅಖ್ತರ್ ಸಾರ್ವಜನಿಕರ ಅಹವಾಲು ಆಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.