ADVERTISEMENT

Krishna Janmashtami in Bengaluru: ಕೃಷ್ಣನ ಆರಾಧನೆ, ಬಾಲ ಲೀಲೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 23:29 IST
Last Updated 16 ಆಗಸ್ಟ್ 2025, 23:29 IST
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತಾದಿಗಳು ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಸರದಿಯಲ್ಲಿ ದೇವರ ದರ್ಶನ ಪಡೆದರು
ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಕ್ತಾದಿಗಳು ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ಸರದಿಯಲ್ಲಿ ದೇವರ ದರ್ಶನ ಪಡೆದರು ಪ್ರಜಾವಾಣಿ ಚಿತ್ರ: ಎಂ. ಎಸ್. ಮಂಜುನಾಥ್   

ಬೆಂಗಳೂರು: ನಗರದ ವಿವಿಧೆಡೆ ಶ್ರದ್ಧಾ–ಭಕ್ತಿ ಮತ್ತು ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಆಚರಿಸಲಾಯಿತು. ಪುಟ್ಟ ಮಕ್ಕಳು ರಾಧಾ–ಕೃಷ್ಣರ ವೇಷ ಧರಿಸಿ ಸಂಭ್ರಮಿಸಿದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. 

ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ವಿದ್ಯಾಪೀಠದ ಪೂರ್ಣಪ್ರಜ್ಞ ವಿದ್ಯಾಪೀಠ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕೃಷ್ಣ–ರಾಧೆಯ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕೆಲವರು ತಮ್ಮ ಮನೆಗಳಲ್ಲಿಯೂ ಕೃಷ್ಣನ ಹೆಜ್ಜೆ ಗುರುತುಗಳನ್ನು ಬರೆದು, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು. ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ಹಾಗೂ ಹೆಣ್ಣು ಮಕ್ಕಳಿಗೆ ರಾಧೆಯ ಅಲಂಕಾರ ಮಾಡಿ ಪಾಲಕರು ಸಂಭ್ರಮಿಸಿದರು. ರಾಧಾ–ಕೃಷ್ಣ ವೇಷಧಾರಿ ಮಕ್ಕಳನ್ನು ದೇವಸ್ಥಾನ, ಮಠಗಳಿಗೆ ಕರೆತರಲಾಗಿತ್ತು. ವೇಷಭೂಷಣ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. 

ADVERTISEMENT
ನಗರದ ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ದೇವಸ್ಥಾನದಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದರು

ಶ್ರೀಕೃಷ್ಣ ಹಳ್ಳಿಕಾರ ಮಹಾ ಸಂಸ್ಥಾನ ಟ್ರಸ್ಟ್ ವತಿಯಿಂದ ಬೆಟ್ಟನಪಾಳ್ಯದ ಶ್ರೀಕೃಷ್ಣನ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಶ್ರೀಕೃಷ್ಣನ ದರ್ಶನ ಪಡೆದರು. ಮುಂಜಾನೆ ವಿವಿಧ ಹೋಮ-ಹವನ, ಪೂಜೆ ಪುರಸ್ಕಾರಗಳು ನಡೆದವು.

ನಾಗದೇವನಹಳ್ಳಿ ಮತ್ತು ಗೊಲ್ಲರಹಟ್ಟಿಯ ಗ್ರಾಮಸ್ಥರು ಭೂತಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು. ಕೃಷ್ಣನ ಸ್ಮರಣೆ ಮಾಡಿ, ಭಕ್ತರಿಗೆ ಅನ್ನದಾನ ಮಾಡಲಾಯಿತು.

ಬಾಗಲಗುಂಟೆಯಲ್ಲಿ ಅಂಗನವಾಡಿ ಮಕ್ಕಳು ರಾಧಾ–ಕೃಷ್ಣರ ವೇಷ ಧರಿಸಿ ಸಂಭ್ರಮಿಸಿದರು. ಶಾಸಕ ಎಸ್. ಮುನಿರಾಜು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ) ಶಕುಂತಲಾ ದೇವಿ ತೇಜಸ್ವಿನಿ ಸೂರಜ್ ಫೌಂಡೇಷನ್ ಅಧ್ಯಕ್ಷೆ ಸುಜಾತ ಮುನಿರಾಜು ಉಪಸ್ಥಿತರಿದ್ದರು
ಇಸ್ಕಾನ್‌ನಲ್ಲಿ ವಿಶೇಷ ಪೂಜೆ
ಇಸ್ಕಾನ್‌ ಹರೇಕೃಷ್ಣ ಗಿರಿ ವೈಕುಂಠ ಗಿರಿ ಮತ್ತು ವೈಟ್‌ಫೀಲ್ಡ್‌ನ ಕರ್ನಾಟಕ ವಾಣಿಜ್ಯ ಪ್ರಚಾರ ಸಂಸ್ಥೆಯಲ್ಲಿ (ಕೆಟಿಪಿಒ) ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಹರೇಕೃಷ್ಣ ಗಿರಿಯಲ್ಲಿ ಶ್ರೀಕೃಷ್ಣ–ಬಲರಾಮರಿಗೆ ಅಭಿಷೇಕ ಸೇವೆ ಹೂವಿನ ಅಲಂಕಾರ ಆರತಿ ಛಪ್ಪನ್ನ ಭೋಗ ನೈವೇದ್ಯ ಸೇವೆ ಪುಷ್ಪಾಂಜಲಿ ಅರ್ಚನೆ ಸೇವೆ ಪಲ್ಲಕ್ಕಿ ಉತ್ಸವ ಮತ್ತು ಉಯ್ಯಲೆ ಸೇವೆ ಹಾಗೂ 108 ಭಕ್ಷ್ಯಗಳ ವಿಶೇಷ ನೈವೇದ್ಯ ಮಾಡಲಾಯಿತು. ‘ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಹರ್ಷದಿಂದ ಪಾಲ್ಗೊಂಡಿದ್ದರು. ಜಗತ್ತಿನ ವಿವಿಧೆಡೆ ಇರುವ ಭಕ್ತರಿಗಾಗಿ ‘ಸ್ವಾಗತಂ ಕೃಷ್ಣ’ ಡಿಜಿಟಲ್ ವೇದಿಕೆ ಮೂಲಕ ಉತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು’ ಎಂದು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧುಪಂಡಿತ ದಾಸ ಹೇಳಿದರು. 
ದಾಬಸ್‌ಪೇಟೆಯ  ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾ–ಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು

ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ

ಕೆ.ಆರ್.ಪುರ: ಸಮೀಪದ ದೇವಸಂದ್ರದ ಮುಖ್ಯರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವರಿಗೆ ಸುಪ್ರಭಾತ, ವಿಶ್ವಸೇನಾ ಆರಾಧನೆ, ವಾಸುದೇವ ಪುಣ್ಯಾಪ ವಚನ ಋದ್ದಿಗಾವರಣ, ರತ್ಮಬಂಧನ, ಅನಿರ್ವಾಣ, ದೀಪಾರೋಹಣ, ದ್ವಾರತೋರಣ, ಧ್ವಜ ಕುಂಭಾರಾಧನೆ, ಏಕೋನ ಪಂಚಾಶೀತ್ರ, ಕಳಸಸ್ಥಾಪನೆ ಷೋಡಶೋಪಚಾರ ಪೂಜೆ ನಡೆದವು. ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಭಕ್ತರಿಗೆ ಅನ್ನಪ್ರಸಾದ ಏರ್ಪಡಿಸಲಾಗಿತ್ತು.

ದೇವಸಂದ್ರ, ಅಯ್ಯಪ್ಪನಗರ, ರಾಮಮೂರ್ತಿನಗರ, ಬಸವನಪುರ, ಹೂಡಿ, ಭಟ್ಟರಹಳ್ಳಿ, ಟಿಸಿ ಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಬಂದಿದ್ದರು. ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್ ಮುಖಂಡರಾದ ಡಿ.ಕೆ.ದೇವೇಂದ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.