ADVERTISEMENT

ಕೆಎಸ್‌ಟಿಡಿಸಿ ಹೋಟೆಲ್‌ ಖಾಸಗಿಗೆ: ಮೈಸೂರಿನ ಲಲಿತ್‌ ಮಹಲ್ ಖಾಸಗೀಕರಣ?

ಪ್ರಸ್ತಾವನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 5:55 IST
Last Updated 15 ಜೂನ್ 2022, 5:55 IST
ಲಲಿತ್‌ ಮಹಲ್
ಲಲಿತ್‌ ಮಹಲ್    

ಬೆಂಗಳೂರು: ಮೈಸೂರಿನ ಲಲಿತ್ ಮಹಲ್ ಮತ್ತು ರಾಜ್ಯದ ವಿವಿಧೆಡೆಗಳಲ್ಲಿರುವ ಕೆಎಸ್‌ಟಿಡಿಸಿ ಹೋಟೆಲ್‌ಗಳನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ಪ್ರತ್ಯೇಕ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಂಪುಟ ಉಪಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ.

ಪ್ರವಾಸೋದ್ಯಮ ಸಚಿವ ಆನಂದ್‌ಸಿಂಗ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಉಪ ಸಮಿತಿ ಸಭೆಯಲ್ಲಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಿಲ್ಲ ಎಂದು ಮೂಲಗಳು ಹೇಳಿವೆ.

ಮೈಸೂರಿನ ಲಲಿತ್ ಮಹಲ್ ಈಗ ಇರುವ ರೀತಿಯಲ್ಲೇ ನಡೆಸಿಕೊಂಡು ಹೋಗಬೇಕೆ ಅಥವಾ ಖಾಸಗಿಯವರಿಗೆ ನೀಡುವುದರಿಂದ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆಯೇ? ಇನ್ನೂ ಉತ್ತಮಪಡಿಸುವ ಬಗ್ಗೆ ವಿಸ್ತೃತವಾದ ಪ್ರಸ್ತಾವನೆಯೊಂದನ್ನು ಸಲ್ಲಿಸಬೇಕು ಎಂದು ಆನಂದ್‌ಸಿಂಗ್‌ ತಿಳಿಸಿದರೆಂದು ಮೂಲಗಳು ಹೇಳಿವೆ.

ADVERTISEMENT

ರಾಜ್ಯದಲ್ಲಿರುವ ಕೆಎಸ್‌ಟಿಡಿಸಿ ಮತ್ತು ಜಂಗಲ್‌ ಲಾಡ್ಜಸ್‌ಗಳಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿಲ್ಲ. ಅಲ್ಪ ಪ್ರಮಾಣದ ಲಾಭದಿಂದ ಏನೂ ಪ್ರಯೋಜನವಿಲ್ಲ. ಸರ್ಕಾರ ಹೆಚ್ಚಿನ ಆದಾಯ ಪಡೆಯಲು ಲೀಸ್‌ ಟೆಂಡರ್‌ಗಳಲ್ಲಿ ಇನ್ನೂ ಹೆಚ್ಚಿನವರು ಮತ್ತು ದೊಡ್ಡ ಸಮೂಹಗಳ ಹೋಟೆಲ್‌ಗಳವರೂ ಪಾಲ್ಗೊಳ್ಳುವಂತೆ ಆಗಬೇಕು, ತಾಜ್‌ ಮಾತ್ರ ಅಲ್ಲ, ಒಬೇರಾಯ್‌ನಂತಹವರೂ ಟೆಂಡರ್‌ನಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ವರ್ಷಕ್ಕೆ ₹1 ಕೋಟಿ ಆದಾಯ ಬರುವ ಕಡೆ ₹5 ಕೋಟಿಯಷ್ಟಾದರೂ ಬರಬೇಕು. ಇಲ್ಲವಾದರೆ ಹೋಟೆಲ್‌ಗಳನ್ನು ನಡೆಸುವುದು ಕಷ್ಟ. ಹೀಗಾಗಿ ಇದಕ್ಕೂ ಒಂದು ಪ್ರಸ್ತಾವನೆ ಸಲ್ಲಿಸಿ ಎಂದು ಸೂಚಿಸಿದರು. ಸಭೆಯಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ಅವರೂ ಇದ್ದರು.

ಈ ಹಿಂದೆ ಸಿ.ಪಿ.ಯೋಗೇಶ್ವರ ಪ್ರವಾಸೋದ್ಯಮ ಸಚಿವರಾಗಿದ್ದಾಗಲೂ ಲಲಿತ್‌ ಮಹಲ್‌ ಹೋಟೆಲ್‌ ಖಾಸಗೀಕರಣ ವಿಚಾರ ಮುನ್ನೆಲೆಗೆ ಬಂದಿತ್ತು. ಮೈಸೂರು ಜನಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಆಗ ಪ್ರಸ್ತಾವನೆಯನ್ನು ಕೈಬಿಟ್ಟು, ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.