ಹೆಸರಘಟ್ಟ: ದಾಸನಪುರ ಹೋಬಳಿ ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಾಕಳಿ-ಹುಸ್ಕೂರು ಮುಖ್ಯರಸ್ತೆಯ ಕೃಷಿ ಮಾರುಕಟ್ಟೆ ಸಮೀಪದ ಪಿಳ್ಳಹಳ್ಳಿ ಕ್ರಾಸ್‌ನಲ್ಲಿರುವ ಪ್ರಯಾಣಿಕರ ತಂಗುದಾಣ ಸಂಪೂರ್ಣ ಶಿಥಿಲವಾಗಿದೆ. ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ.
ತಂಗುದಾಣದ ಚಾವಣಿ ಶಿಥಿಲವಾಗಿದ್ದು ಬೀಳುವ ಹಂತದಲ್ಲಿದೆ. ಮಳೆ ಬಂದರೆ ಸೋರುತ್ತದೆ. ಕಸ, ತ್ಯಾಜ್ಯಗಳನ್ನು ತುಂಬುವ ಜಾಗವಾಗಿದೆ.ಈ ತಂಗುದಾಣದಲ್ಲಿ ಕೆಲವು ತಿಂಗಳುಗಳಿಂದ ಲಗೇಜ್ ಆಟೊ ನಿಲ್ಲಿಸುತ್ತಿದ್ದಾರೆ. ಇಲ್ಲಿ ಸುರಿದ ಕಸದ ರಾಶಿಗೆ ಒಮ್ಮೊಮ್ಮೆ ಬೆಂಕಿ ಹಚ್ಚಲಾಗುತ್ತದೆ. ಸ್ವಚ್ಛತೆ ಇಲ್ಲದ ಕಾರಣ, ಪ್ರಯಾಣಿಕರು ತಂಗುದಾಣದಲ್ಲಿ ನಿಲ್ಲುತ್ತಿಲ್ಲ.
ಈ ತಂಗುದಾಣವು ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೊಂದಿಕೊಂಡಂತಿದೆ. ಇದೇ ರಸ್ತೆಯಲ್ಲಿ ನೆಲಮಂಗಲ, ದೊಡ್ಡಬಳ್ಳಾಪುರ ಮಾಕಳಿ, ಬೆಂಗಳೂರು ಕಡೆಗೆ ಹೋಗುವಂತಹ ಬಸ್ಸುಗಳು ಸಂಚರಿಸುತ್ತವೆ. ಇಲ್ಲಿ ಹೆಚ್ಚು ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುತ್ತಾರೆ. ತಂಗುದಾಣ ಹಾಳಾಗಿರುವುದರಿಂದ, ಪ್ರಯಾಣಿಕರು ಬಿಸಿಲು, ಮಳೆಯಲ್ಲೇ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಇದೆ.
‘ತಂಗುದಾಣದ ಚಾವಣಿ ಸೇರಿದಂತೆ, ಹಾಳಾಗಿರುವ ಎಲ್ಲ ಭಾಗಗಳನ್ನು ದುರಸ್ತಿಗೊಳಿಸಬೇಕು. ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಬೇಕು. ಉತ್ತಮ ಆಸನಗಳ ವ್ಯವಸ್ಥೆಯಾಗಬೇಕು. ಪ್ರಯಾಣಿಕರು ನಿಲ್ಲಲು ಮತ್ತು ಕುಳಿತುಕೊಳ್ಳುವಂತಹ ವಾತಾವರಣ ನಿರ್ಮಿಸಬೇಕು’ ಎಂದು ಸ್ಥಳೀಯ ವ್ಯಾಪಾರಿ ನಾಗರಾಜು ಹುಸ್ಕೂರು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬಸ್ ತಂಗುದಾಣ ಹಾಳಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸ್ಥಳ ಪರಿಶೀಲನೆ ಮಾಡಿ ಪಂಚಾಯಿತಿ ವತಿಯಿಂದ ದುರಸ್ತಿಮಾಡಲು ಕ್ರಮ ಕೈಗೊಳ್ಳಲಾಗುವುದು.-ಬಿ.ರಮೇಶ್ ಅಧ್ಯಕ್ಷ ಹುಸ್ಕೂರು ಗ್ರಾಮ ಪಂಚಾಯತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.