ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಎಕ್ಸ್‌ಪ್ರೆಸ್ ಹೈವೇಯಂತೆ ಒಟ್ಟು ಹತ್ತು ಪಥಗಳು ಲಾಲ್‌ಬಾಗ್‌ನ 50 ಅಡಿಯಿಂದ 100 ಅಡಿ ಕೆಳಭಾಗದಲ್ಲಿ ಸಾಗಲಿವೆ.
16.5 ಕಿ.ಮೀ ಉದ್ದದ ಉತ್ತರ–ದಕ್ಷಿಣ ಸುರಂಗ ರಸ್ತೆಯ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್) ಲಾಲ್‌ಬಾಗ್ ಕೆಳಭಾಗದಲ್ಲಿ ಸುರಂಗ ರಸ್ತೆ ಸಾಗಲಿದೆ ಎಂದು ತಿಳಿಸಲಾಗಿದೆ. ಇದರಿಂದ, ಜೈವಿಕ ಸೂಕ್ಷ್ಮ ಪ್ರದೇಶವಷ್ಟೇ ಆಗಿರದೆ, ಬೆಂಗಳೂರಿನ ಕಿರೀಟದಂತಿರುವ ಲಾಲ್‌ಬಾಗ್ ಉದ್ಯಾನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಅಶೋಕ ಪಿಲ್ಲರ್ ವೃತ್ತದಲ್ಲಿ ಪ್ರವೇಶ ರ್‍ಯಾಂಪ್ ನಿರ್ಮಾಣಕ್ಕೆ ಪ್ರಸ್ತಾಪಿಸಿರುವ ಎರಡು ಪಥಗಳು, ಲಾಲ್‌ಬಾಗ್ ಕೆರೆಗೆ ಸಮೀಪವೇ ಹಾದುಹೋಗಿ, ಆರು ಪಥಗಗಳ ಸುರಂಗ ರಸ್ತೆಯನ್ನು ಹೆಬ್ಬಾಳದತ್ತ ಸೇರಿಕೊಳ್ಳಲಿವೆ. ಮತ್ತೊಂದು, 1.1 ಕಿ.ಮೀ ಉದ್ದದ ಎರಡು ಪಥಗಳ ರ‍್ಯಾಂಪ್, ಲಾಲ್‌ಬಾಗ್ ಒಳಗಿರುವ ಮೂರು ಶತಕೋಟಿ ವರ್ಷಗಳಿಗೂ ಹಿಂದೆ ನಿರ್ಮಾಣವಾಗಿರುವ ಬೃಹತ್ ಬಂಡೆಯ ಕೆಳಭಾಗದಲ್ಲಿ ಹಾದುಹೋಗಿ, ಸಿದ್ದಾಪುರ ರಸ್ತೆ ಮರಿಗೌಡ ಜಂಕ್ಷನ್‌ನಲ್ಲಿ ಈಗಾಗಲೇ ಸಂಚಾರ ದಟ್ಟಣೆ ಇರುವ ಪ್ರದೇಶದಲ್ಲಿ ನಿರ್ಗಮನ ಹೊಂದಲಿದೆ.
ಒಟ್ಟಾರೆಯಾಗಿ, 2.56 ಲಕ್ಷ ಚದರ ಅಡಿ (ಆರು ಎಕರೆಗೂ ಹೆಚ್ಚು) ಭೂಮಿ ಈ ಯೋಜನೆಗೆ ಅಗತ್ಯವಿದೆ. ಲಾಲ್‌ಬಾಗ್‌ನೊಳಗೆ ಸುರಂಗ ರಸ್ತೆಯ ಪ್ರವೇಶ–ನಿರ್ಗಮನದ ಸೌಲಭ್ಯಗಳ ತಾಣ (ಶಾಫ್ಟ್) ನಿರ್ಮಾಣವಾಗುವ ಯೋಜನೆ ಇದೆ. ಇಲ್ಲಿಂದ, ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಲಾಲ್‌ಬಾಗ್‌ನಿಂದ 700 ಮೀಟರ್ ಕೆಳಭಾಗದಲ್ಲಿ ಸಾಗಲಿದೆ.
ಈ ವರ್ಷದ ಮೇನಲ್ಲಿ, ಸರ್ಕಾರ ರಚಿಸಿದ ತಜ್ಞರ ಸಮಿತಿ ಸುರಂಗ ರಸ್ತೆಯ ಅಲೈನ್‌ಮೆಂಟ್ ಹಾಗೂ ಲಾಲ್‌ಬಾಗ್‌ನಲ್ಲಿ ಜೀವವೈವಿಧ್ಯದ ಸೂಕ್ಷ್ಮತೆ ಬಗ್ಗೆ ಗಂಭೀರ ಕಳವಳ
ವ್ಯಕ್ತಪಡಿಸಿದೆ. ಶಾಫ್ಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಆದರೆ, ಇದು ಇನ್ನೂ ಯೋಜನೆಯಲ್ಲಿ ಸೇರ್ಪಡೆಯಾಗಿಲ್ಲ.
ಹೆಬ್ಬಾಳ– ಸರ್ಜಾಪುರದ ನಮ್ಮ ಮೆಟ್ರೊ ಮಾರ್ಗ ರಸ್ತೆಯ ಕೆಳಭಾಗದಲ್ಲೇ ಬಹುತೇಕ ಸಾಗಿ, ಹೆಚ್ಚುವರಿ ನಷ್ಟ ಹಾಗೂ ಆಸ್ತಿ ನಾಶವನ್ನು ತಡೆಯುತ್ತದೆ. ಆದರೆ, ಕೇಂದ್ರ ರೇಷ್ಮೆ ಬೋರ್ಡ್‌ನಿಂದ
ಹೆಬ್ಬಾಳದವರೆಗಿನ ಸುರಂಗ ರಸ್ತೆ ಅಲೈನ್‌ಮೆಂಟ್ ಉದ್ಯಾನದ ಕೆಳಭಾಗದಲ್ಲಿ ಮಾತ್ರ ಸಾಗದೆ, ವಸತಿ ಹಾಗೂ ವಾಣಿಜ್ಯ ಪ್ರದೇಶದ ಕೆಳಗೂ ಸಾಗಲಿದೆ.
‘ಲಾಲ್‌ಬಾಗ್ ಉದ್ಯಾನ ಮಾತ್ರ ಆಗಿರದೆ, ಹಸಿರಿನ ಮ್ಯೂಸಿಯಂ ಆಗಿದೆ. ಸಂರಕ್ಷಣೆ, ಶಿಕ್ಷಣ ಮತ್ತು ಮನರಂಜನೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಸುರಂಗ ಯೋಜನೆ ಜೀವವೈವಿಧ್ಯಕ್ಕೆ ಸಂಪೂರ್ಣ ಹಾನಿ ಮಾಡಲಿದ್ದು, ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್‌ನ ಸಂಚಾಲಕ ರಾಜ್‌ಕುಮಾರ್ ದುಗಾರ್ ಆಗ್ರಹಿಸಿದರು.
ಆರು ಎಕರೆ ಜಾಗವನ್ನು ತಾತ್ಕಾಲಿಕ ಬಳಕೆ
‘ಉದ್ಯಾನದ ಆರು ಎಕರೆ ಜಾಗವನ್ನು ತಾತ್ಕಾಲಿಕವಾಗಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಬಹುತೇಕ ಭೂಮಿಯನ್ನು ಉಳಿಸಿ ಹೀಗಿರುವಂತೆಯೇ ವಾಪಸ್ ನೀಡಲಾಗುತ್ತದೆ. ಉದ್ದೇಶಿತ ಶಾಫ್ಟ್ ಉದ್ಯಾನದ ಒಳಭಾಗದಲ್ಲಿದ್ದು ಬಂಡೆಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಈ ಪ್ರದೇಶದಲ್ಲೇ ತೋಟಗಾರಿಕೆ ಇಲಾಖೆ ಈ ಹಿಂದೆ ಬಹು–ಅಂತಸ್ತಿನ ಕಾರು ನಿಲುಗಡೆ ಸೌಲಭ್ಯವನ್ನು ಪ್ರಸ್ತಾಪಿಸಿತ್ತು’ ಎಂದು ಬಿ–ಸ್ಮೈಲ್‌ನ ಹಿರಿಯ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.