ADVERTISEMENT

ಬೆಂಗಳೂರು | 500 ಎಕರೆ ಸರ್ಕಾರಿ ಭೂಮಿ ಕಬಳಿಕೆ: ಎನ್‌.ಆರ್‌. ರಮೇಶ್‌

ತಾವರೆಕೆರೆ ಹೋಬಳಿಯಲ್ಲಿ ₹12,000 ಕೋಟಿ ಮೌಲ್ಯದ ಜಮೀನು ವಶಪಡಿಸಿಕೊಳ್ಳಲು ಎನ್‌.ಆರ್‌. ರಮೇಶ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 14:36 IST
Last Updated 4 ಡಿಸೆಂಬರ್ 2025, 14:36 IST
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಕೆಂಪೇಗೌಡ ಪೌರ ಸಭಾಂಗಣ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಕೆಂಪೇಗೌಡ ಪೌರ ಸಭಾಂಗಣ   

ಬೆಂಗಳೂರು: ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿಯಲ್ಲಿ ₹12 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 500 ಎಕರೆ ಸರ್ಕಾರಿ ಭೂಮಿಯನ್ನು ಪ್ರಭಾವಿಗಳು ಕಬಳಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌. ರಮೇಶ್‌ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ವರದಿಯಂತೆ ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 1,600 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಸರ್ಕಾರಿ ಸ್ವತ್ತುಗಳಿವೆ. ಇದರಲ್ಲಿ 500 ಎಕರೆಯನ್ನು ಕಬಳಿಸಲಾಗಿದೆ. ಈ ಬಗ್ಗೆ 8,879 ಪುಟಗಳ ದಾಖಲೆ ಸಹಿತ ದೂರು ದಾಖಲಿಸಲಾಗಿದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು, ಎಂಟು ಪ್ರಕರಣಗಳಲ್ಲಿ ಕಬಳಿಸಲಾಗಿರುವ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಬೇಕು. ಕಾನೂನು ಪ್ರಕಾರ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಶಾಸಕರ ಪತ್ನಿ, ಬಿಬಿಎಂಪಿಯ ಮಾಜಿ ಉಪ ಮೇಯರ್ ಅವರ ಪತ್ನಿ, ಇಬ್ಬರು ಐಎಎಸ್‌, ಐವರು ಕೆಎಎಸ್‌ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಭ್ರಷ್ಟಾಚಾರ, ನಕಲಿ ದಾಖಲೆ ತಯಾರಿಕೆ, ವಂಚನೆ, ಸರ್ಕಾರಿ ಜಮೀನು ಕಬಳಿಕೆಗೆ ಸಹಕಾರ, ಅಧಿಕಾರ ದುರುಪಯೋಗ ಆರೋಪಗಳಡಿ ಪ್ರಕರಣ ದಾಖಲಿಸಲು ಕೋರಲಾಗಿದೆ’ ಎಂದರು.

‘ದೇವ ಮಾಚೋಹಳ್ಳಿ, ಯಲಚಗುಪ್ಪೆ ರಾಂಪುರ, ಗಾಣಕಲ್ಲು, ಯಲಚಗುಪ್ಪೆ, ಕುರುಬರಹಳ್ಳಿ, ತಾವರೆಕರೆ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.