ADVERTISEMENT

₹200 ಕೋಟಿ ಮೌಲ್ಯದ ಆಸ್ತಿಗಾಗಿ ಖಾಲಿ ನಿವೇಶನದ ವಿಳಾಸ!

ಮಂಜುನಾಥ್ ಹೆಬ್ಬಾರ್‌
Published 6 ಏಪ್ರಿಲ್ 2021, 20:24 IST
Last Updated 6 ಏಪ್ರಿಲ್ 2021, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರ ಜಿಲ್ಲೆಯ ಹೆಸರಘಟ್ಟ ಹೋಬಳಿಯ ಮಾದಪ್ಪನಹಳ್ಳಿಯ ₹200 ಕೋಟಿ ಮೌಲ್ಯದ ಆಸ್ತಿಗಾಗಿ ವರ್ಷಾನುಗಟ್ಟಲೆ ಕಾನೂನು ಹೋರಾಟ ಮಾಡಿದ್ದ ಕುಟುಂಬ ಖಾಲಿ ನಿವೇಶನದಲ್ಲಿ ವಾಸವಿತ್ತೇ?

32 ಎಕರೆ ಭೂವಿವಾದದ ಪ್ರಮುಖ ಪ್ರತಿವಾದಿಯಾದ ನರಸಿಂಹಯ್ಯ ಮೃತಪಟ್ಟ ವೇಳೆ ಅವರ ಪುತ್ರ ನರಸಿಂಹಮೂರ್ತಿ ನೀಡಿದ ಮರಣ ಪ್ರಮಾಣಪತ್ರದಲ್ಲಿರುವ ವಿಳಾಸ ನೋಡಿದಾಗ ಅಧಿಕಾರಿಗಳಿಗೆ ಮೂಡಿದ ಅನುಮಾನವಿದು.

ಕೂಲಂಕಷವಾಗಿ ಪರಿಶೀಲಿಸಿದಾಗ ವಿಳಾಸನಕಲಿ ಎಂಬುದು ಅಧಿಕಾರಿಗಳಿಗೆ ಖಾತ್ರಿಯಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿಯೇ 32 ಎಕರೆ ಬಂಜರು ಭೂಮಿ ಮೇಲೆ ಹಕ್ಕು ಸ್ಥಾಪಿಸಿದ್ದ ಕುಟುಂಬ ನೀಡಿದ ಮತ್ತೊಂದು ದಾಖಲೆಯೂ ನಕಲಿ. ನಕಲಿ ದಾಖಲೆ ಸೃಷ್ಟಿಸುವ ಕೈಚಳಕಕ್ಕೆ ಅಧಿಕಾರಿಗಳೇ ದಂಗಾಗಿದ್ದರು. ಇದಾದ ಬಳಿಕ ಕುಟುಂಬದ ವಿರುದ್ಧ ಯಲಹಂಕ ತಹಶೀಲ್ದಾರ್‌ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದರು. ಅಷ್ಟೂ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ವಿಶೇಷ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್‌ ಆದೇಶ ಹೊರಡಿಸುವ ವೇಳೆ ಈ ಅಂಶಗಳನ್ನು ಪೂರಕ ದಾಖಲೆಗಳನ್ನಾಗಿ ಪರಿಗಣಿಸಿದ್ದಾರೆ.

ADVERTISEMENT

‘ಮಾದಪ್ಪನಹಳ್ಳಿಯ ಸರ್ವೆ ನಂಬರ್ 62ರ ಜಮೀನು ತಮಗೆ ಸೇರಿದ್ದು’ ಎಂದು ಕೋರಿ ನರಸಿಂಹಯ್ಯ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಪ್ರತಿವಾದಿಗಳ ಪರ ಆದೇಶ ಹೊರಡಿಸಿದ್ದರು. ಬಳಿಕ ಜಿಲ್ಲಾಧಿಕಾರಿ, ‘ಅದು ಸರ್ಕಾರಿ ಜಮೀನು’ ಎಂದು ಮರು ಆದೇಶ ಹೊರಡಿಸಿದ್ದರು. ಇದರ ವಿರುದ್ಧ ನರಸಿಂಹಯ್ಯ ಕುಟುಂಬದ ಸದಸ್ಯರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ‘ಮರು ಆದೇಶ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಿಲ್ಲ’ ಎಂದು ಹೈಕೋರ್ಟ್‌ ಹೇಳಿತ್ತು.

ಈ ನಡುವೆ, 2016ರಲ್ಲಿ ನರಸಿಂಹಯ್ಯ ಮೃತಪಟ್ಟಿದ್ದರು. ಅವರ ಪುತ್ರ ನರಸಿಂಹಮೂರ್ತಿ ಖಾತೆಯನ್ನುತಮ್ಮ ಹೆಸರಿಗೆ ವರ್ಗಾಯಿಸುವಂತೆ ಕೋರಿದ್ದರು. ತಂದೆಯ ಮರಣ ಪ್ರಮಾಣಪತ್ರವನ್ನೂ ನೀಡಿದ್ದರು.

ಈ ದಾಖಲೆಗಳ ಬಗ್ಗೆ ಯಲಹಂಕದ ಆಗಿನ ತಹಶೀಲ್ದಾರ್‌ ಬಿ.ಆರ್.ಮಂಜುನಾಥ್‌ ಅವರಿಗೆ ಅನುಮಾನ ಮೂಡಿತ್ತು. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದ ವಿಳಾಸವು ಯಲಹಂಕ ತಾಲ್ಲೂಕಿನಲ್ಲಿತ್ತು. ಕಂದಾಯ ಅಧಿಕಾರಿಯು ಆ ವಿಳಾಸಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿದ್ದುದು ಖಾಲಿ ನಿವೇಶನ! ಪ್ರತಿವಾದಿಗಳು ಸುಳ್ಳು ವಿಳಾಸ ನೀಡಿದ್ದಾರೆ ಎಂದು ಕಂದಾಯ ಅಧಿಕಾರಿ ವರದಿ ನೀಡಿದ್ದರು.

ನರಸಿಂಹಯ್ಯ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಬಿಬಿಎಂಪಿಗೆ ಜಿಲ್ಲಾಡಳಿತ ಪತ್ರ ಬರೆದಿತ್ತು. ರಾಜಾನುಕುಂಟೆ ಠಾಣಾ ವ್ಯಾಪ್ತಿಯ ಸ್ಮಶಾನದಲ್ಲಿ ಹೆಣವನ್ನು ಹೂಳಿದ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೀಡಿರುವ ಪ್ರಮಾಣಪತ್ರ, ಅಶ್ವಿನಿ ಆಸ್ಪತ್ರೆಯಲ್ಲಿ ನರಸಿಂಹಯ್ಯ ಚಿಕಿತ್ಸೆ ಪಡೆದಿದ್ದ ದಾಖಲೆ ಹಾಗೂ ನರಸಿಂಹಯ್ಯ ಅವರ ಮತದಾರರ ಗುರುತಿನ ಚೀಟಿಯನ್ನು ಪಾಲಿಕೆ ನೀಡಿತ್ತು.

‘ನಾನು ಈ ಪ್ರಮಾಣಪತ್ರ ನೀಡಿಲ್ಲ’ ಎಂದು ಪಿಡಿಒ ಸ್ಪಷ್ಟಪಡಿಸಿದ್ದರು. ‘ಆಸ್ಪತ್ರೆಯಲ್ಲಿ ನರಸಿಂಹಯ್ಯ ಚಿಕಿತ್ಸೆ ಪಡೆದಿಲ್ಲ’ ಎಂದು ಅಶ್ವಿನಿ ಆಸ್ಪತ್ರೆ ತಿಳಿಸಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮರಣ ಪ್ರಮಾಣಪತ್ರ ಪಡೆಯಲಾಗಿದೆ ಎಂದು ತಹಶೀಲ್ದಾರ್‌ ವರದಿ ಸಲ್ಲಿಸಿದ್ದರು.

ಮತದಾರರ ಗುರುತಿನ ಚೀಟಿಯೂ ನಕಲಿ: ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿಯೊಂದಿಗೆ ನರಸಿಂಹಮೂರ್ತಿ ಅವರು ತಮ್ಮ (ಗುರುತಿನ ಚೀಟಿನ ಸಂಖ್ಯೆ 3906393) ಹಾಗೂ ತಂದೆಯ (ಗುರುತಿನ ಚೀಟಿನ ಸಂಖ್ಯೆ 3806783) ಮತದಾರರ ಗುರುತಿನ ಚೀಟಿಗಳನ್ನು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಒಂದು ಗುರುತಿನ ಚೀಟಿ (ಸಂಖ್ಯೆ 3806783) ಅನಂತರಾಮ್ ಎಂಬುವರ ಪುತ್ರ ಮಂಜುನಾಥ ಎ. ಹಾಗೂ ಮತ್ತೊಂದು (ಸಂಖ್ಯೆ 3906393) ಸತ್ಯಪ್ರಕಾಶ್‌ ಎಂಬುವರ ಪತ್ನಿ ದೀಪಿಕಾ ಎಂಬುವರದ್ದು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.