ಬೆಂಗಳೂರು: ಮೆಜೆಸ್ಟಿಕ್‌ಗೆ ಹೊಂದಿಕೊಂಡಂತೆ ಇರುವ ‘ಸುರಂಗ ಮಾರ್ಗ’ ಹಾಗೂ ‘ಮೇಲ್ಸೇತುವೆ’ಯ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವವರಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಮತ್ತೆ ತಲೆಯೆತ್ತಿರುವ ಅಕ್ರಮ ವ್ಯಾಪಾರ ಮಳಿಗೆಗಳಿಂದಾಗಿ ಪಾದಚಾರಿ ಮಾರ್ಗದಲ್ಲಿ ಓಡಾಟ ನಡೆಸುವವರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಕೆಲವು ಸ್ಥಳಗಳಲ್ಲಿ ಜನರಿಗೆ ಓಡಾಡುವುದೇ ಕಷ್ಟವಾಗಿದೆ.
‘ನಮ್ಮ ಮೆಟ್ರೊ’ ನಾಡಪ್ರಭು ಕೆಂಪೇಗೌಡ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬರಲು ಸುರಂಗ ಮಾರ್ಗ ನಿರ್ಮಿಸಲಾಗಿದೆ. ಆ ಸುರಂಗ ಮಾರ್ಗದ ಮೂಲಕ ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಲು ವ್ಯವಸ್ಥೆಯಿದ್ದು, ಎರಡೂ ಬದಿಯಲ್ಲಿ ಅಕ್ರಮವಾಗಿ ವ್ಯಾಪಾರ ನಡೆಯುತ್ತಿದೆ. ಮೆಜೆಸ್ಟಿಕ್‌ನಿಂದ ಗಾಂಧಿ ನಗರಕ್ಕೆ ತೆರಳುವ ಸುರಂಗ ಮಾರ್ಗದಲ್ಲೂ ಸಮಸ್ಯೆ ವಿಪರೀತವಾಗಿದೆ. ಗಣೇಶ ದೇವಸ್ಥಾನದ ಕಡೆಗೆ ತೆರಳುವ ಪ್ಲಾಟ್‌ಫಾರಂ ರಸ್ತೆಯನ್ನೂ ಬಟ್ಟೆ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿದ್ದಾರೆ.
ಗೃಹ ರಕ್ಷಕ ದಳದ ಸಿಬ್ಬಂದಿ ಕಾವಲು: ಮೆಜೆಸ್ಟಿಕ್‌ನ ಮೇಲ್ಸೇತುವೆಯ ಪಾದಚಾರಿ ಮಾರ್ಗದಲ್ಲಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕಾವಲಿಗೆ ನಿಯೋಜಿಸಲಾಗಿದೆ. ಅವರ ಮಾತಿಗೆ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂಬ ಆರೋಪವಿದೆ.
ರಾಜಾರೋಷವಾಗಿ ತಮ್ಮ ವ್ಯಾಪಾರ ಚಟುವಟಿಕೆಯನ್ನು ಮುಂದುವರಿಸಿದ್ದಾರೆ. ವಾಚ್, ಸ್ಪೀಕರ್, ಇಯರ್ ಫೋನ್, ಮೊಬೈಲ್ ಕವರ್, ಹೂವು, ಆಟಿಕೆ ವಸ್ತುಗಳು, ಹ್ಯಾಟ್, ಬಟ್ಟೆ, ಹಣ್ಣುಗಳ ವ್ಯಾಪಾರ ಪಾದಚಾರಿ ಮಾರ್ಗದಲ್ಲೇ ನಿರಾತಂಕವಾಗಿ ಮುಂದುವರಿದಿದೆ.
‘ಅಕ್ರಮ’ ವ್ಯಾಪಾರ ಜೋರಾಗಿದ್ದು, ಇದನ್ನು ಪ್ರಶ್ನಿಸುವ ಜನರ ಮೇಲೆ ವ್ಯಾಪಾರಿಗಳು ಹಲ್ಲೆ ಮಾಡುತ್ತಿದ್ದಾರೆ. ತಮ್ಮದೇ ಗುಂಪು ಕಟ್ಟಿಕೊಂಡು ಹಲ್ಲೆ ನಡೆಸಿ ಬೆದರಿಕೆ ಒಡ್ಡುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿವೆ ಎಂದು ಮೂಲಗಳು ಹೇಳಿವೆ.
ನಿಲ್ದಾಣಕ್ಕೆ ಬಂದು ಹೋಗುವ ಜನರ ಸಂಚಾರಕ್ಕೆ ಅನುಕೂಲವಾಗಲೆಂದು ಸುರಂಗ ಮಾರ್ಗ ನಿರ್ಮಿಸಲಾಗಿದ್ದು, ‘ಕಡ್ಡಾಯವಾಗಿ ಸುರಂಗ ಮಾರ್ಗ ಬಳಸಿ’ ಎಂಬ ನಾಮಫಲಕವನ್ನು ಅಲ್ಲಲ್ಲಿ ಹಾಕಲಾಗಿದೆ. ಆದರೆ, ಜನರು ಓಡಾಡುವ ಸ್ಥಳವನ್ನೇ ಅತಿಕ್ರಮಿಸಿಕೊಂಡು ವ್ಯಾಪಾರಿಗಳು ವಹಿವಾಟು ನಡೆಸುತ್ತಿರುವ ಕಾರಣ ಓಡಾಟಕ್ಕೆ ತೊಂದರೆ ಆಗುತ್ತಲೇ ಇದೆ.
‘ಯಾರಾದರೂ ಹಣ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದರೆ ದೂರು ನೀಡಬಹುದು ಎಂಬುದಾಗಿ ಅಲ್ಲಲ್ಲಿ ತಡೆಗೋಡೆಯ ಮೇಲೆ ಪ್ರಕಟಿಸಲಾಗಿದೆ. ಆದರೆ, ನಡೆದು ಹೋಗುವ ಸಾರ್ವಜನಿಕರಿಗೆ ಕಿರಿಕಿರಿ ಹಾಗೂ ಮುಜುಗರದ ಸನ್ನಿವೇಶಗಳು ಪ್ರತಿನಿತ್ಯ ಎದುರಾಗುತ್ತಲೇ ಇವೆ’ ಎಂದು ಪ್ರಯಾಣಿಕ ರಮೇಶ್ ಹೇಳಿದರು.
ಆದೇಶಕ್ಕೂ ಕಿಮ್ಮತ್ತಿಲ್ಲ: ‘ಮೆಜೆಸ್ಟಿಕ್‌ನ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ವ್ಯಾಪಾರಕ್ಕೆ ಅವಕಾಶ ನೀಡಬಾರದು’ ಎಂದು ಬಿಬಿಎಂಪಿಗೆ ಸೂಚಿಸಿ 2019ರ ಆಗಸ್ಟ್ 27ರಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆಗ ಎಚ್ಚೆತ್ತ ಬಿಬಿಬಿಎಂಪಿ ಅಧಿಕಾರಿಗಳು, ಅನಧಿಕೃತ ಅಂಗಡಿಗಳನ್ನು ತೆರವು ಮಾಡಿದ್ದರು. ಅದಾದ ಮೇಲೆ ಅದೇ ಸ್ಥಳದಲ್ಲಿ ಅಂಗಡಿಗಳು ಪ್ರತ್ಯಕ್ಷವಾಗಿದ್ದವು.
‘ಮಾಧ್ಯಮದಲ್ಲಿ ವರದಿಯಾದ ಬಳಿಕ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಅಂಗಡಿಗಳನ್ನು ತೆರವು ಮಾಡುತ್ತಾರೆ. ಕೆಲವು ದಿನಗಳ ಬಳಿಕ ಅದೇ ಸ್ಥಳದಲ್ಲಿ ವ್ಯಾಪಾರಿಗಳು ನಿರಾತಂಕವಾಗಿ ವ್ಯಾಪಾರ ನಡೆಸುತ್ತಾರೆ’ ಎಂದು ಪ್ರಯಾಣಿಕರು ದೂರಿದ್ದಾರೆ.
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ. ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಆದರೆ ಸುರಕ್ಷತೆ ಇಲ್ಲ. ಎಲ್ಲೂ ತಪಾಸಣೆಯಿಲ್ಲ.– ಸುಧೀರ್ ರೆಡ್ಡಿ ಬಳ್ಳಾರಿ
ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಿ ಅಲ್ಲಿಗೆ ಸ್ಥಳಾಂತರ ಮಾಡಬೇಕು. ಮೆಜೆಸ್ಟಿಕ್‌ನ ಪಾದಚಾರಿ ಮಾರ್ಗದಲ್ಲಿ ದಿನದ 24 ಗಂಟೆಯೂ ಭದ್ರತೆಗೆ ಪೊಲೀಸರನ್ನು ನಿಯೋಜಿಸಬೇಕು.– ಸವಿತಾ ದಾಸರಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.