ADVERTISEMENT

ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

ಖಲೀಲಅಹ್ಮದ ಶೇಖ
Published 18 ಜನವರಿ 2026, 1:22 IST
Last Updated 18 ಜನವರಿ 2026, 1:22 IST
<div class="paragraphs"><p>ಮೆಜೆಸ್ಟಿಕ್ ಬಸ್ ನಿಲ್ದಾಣದ ಸರ್ವೀಸ್‌ ರಸ್ತೆಯಲ್ಲಿನ ಸಂಚಾರ ದಟ್ಟಣೆ&nbsp; ಪ್ರಜಾವಾಣಿ </p></div>

ಮೆಜೆಸ್ಟಿಕ್ ಬಸ್ ನಿಲ್ದಾಣದ ಸರ್ವೀಸ್‌ ರಸ್ತೆಯಲ್ಲಿನ ಸಂಚಾರ ದಟ್ಟಣೆ  ಪ್ರಜಾವಾಣಿ

   

ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ನಗರದ ಹೃದಯಭಾಗದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ನಿತ್ಯವೂ ಪಜೀತಿ ಉಂಟಾಗುತ್ತಿದೆ.

ADVERTISEMENT

ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ, ಟ್ಯಾಂಕ್‌ಬಂಡ್‌ ರಸ್ತೆ, ಧನ್ವಂತರಿ ರಸ್ತೆಯ ಮೂಲಕ ಮೆಜೆಸ್ಟಿಕ್‌–ಗಾಂಧಿನಗರ ‍ಪ್ರವೇಶಿಸುತ್ತವೆ. 

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೆ ನಿತ್ಯ ಸಾವಿರಾರು ಬಸ್‌ಗಳು ತೆರಳುತ್ತವೆ. ಇದರಿಂದ ಬೆಳಿಗ್ಗೆ 8ರಿಂದ 11ರ ವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 11ರ ವರೆಗೆ ವಿಪರೀತ ದಟ್ಟಣೆ ಆಗುತ್ತಿದೆ. 

ಇದರ ಜೊತೆಗೆ ಯಶವಂತಪುರ, ಯಲಹಂಕ, ಮಲ್ಲೇಶ್ವರ, ಶೇಷಾದ್ರಿಪುರ, ಕುರುಬರಹಳ್ಳಿ, ರಾಜಾಜಿನಗರದಿಂದ ಬರುವ ಬಿಎಂಟಿಸಿ ಬಸ್‌ಗಳು ಪ್ಲಾಟ್‌ಫಾರಂ ರಸ್ತೆಯ ಮೂಲಕ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ತೆರಳುತ್ತವೆ. ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿರುವ ಕಾರಣ ಕಿರಿದಾದ ರಸ್ತೆಯಲ್ಲಿ ನಿತ್ಯ ದಟ್ಟಣೆಯ ಅವಧಿಯಲ್ಲಿ ಓಕಳಿಪುರದ ಮಿಲ್‌ ಜಂಕ್ಷನ್‌ನಿಂದ ಮಂತ್ರಿ ಸ್ಕ್ವೇರ್‌ನಲ್ಲಿರುವ ರಾಜೀವ್‌ ಗಾಂಧಿ ವೃತ್ತದವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. 

‘ಬೆಳಗಿನ ಜಾವ 4 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ಸಂಜೆ 7ರಿಂದ ರಾತ್ರಿ 11ರ ವರೆಗೆ ಟ್ಯಾಂಕ್‌ಬಂಡ್‌ ರಸ್ತೆಯ ಉದ್ದಕ್ಕೂ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವುದರ ಜೊತೆಗೆ ಲಗೇಜ್‌ ಲೋಡ್‌ ಮಾಡಿಕೊಳ್ಳಲು ಸಾಲುಗಟ್ಟಿ ನಿಲುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ತೆರಳಲು ಸಂಚಾರ ವಿಭಾಗದ ಪೊಲೀಸರು ನಿರ್ಬಂಧಿಸುತ್ತಾರೆ. ಆದರೆ, ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತಾರೆ. ಇದು ಮೆಜೆಸ್ಟಿಕ್‌ ಸುತ್ತ ಮುತ್ತಲೂ ಸಂಚಾರ ದಟ್ಟಣೆ ಹೆಚ್ಚಾಗಲು ಕಾರಣ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಮೆಜೆಸ್ಟಿಕ್, ಗಾಂಧಿನಗರ, ಓಕಳಿಪುರ, ಮಲ್ಲೇಶ್ವರ, ರೇಸ್‌ಕೋರ್ಸ್‌ ರಸ್ತೆ, ಕೆ.ಜಿ.ರಸ್ತೆ, ಶೇಷಾದ್ರಿಪುರ, ಮಲ್ಲೇಶ್ವರ ವೃತ್ತ, ರಾಜಾಜಿನಗರ, ಶ್ರೀರಾಮಪುರ, ಅರಮನೆ ರಸ್ತೆ, ಕೆ.ಆರ್.ವೃತ್ತ, ಕಾರ್ಪೊರೇಷನ್ ವೃತ್ತ, ಹಳೇ ಮೈಸೂರು ರಸ್ತೆ, ಚಾಲುಕ್ಯ ವೃತ್ತ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನವಾಗಿ ದಟ್ಟಣೆ ಉಂಟಾಗುತ್ತದೆ’ ಎಂದು ಕೆ.ಆರ್. ವೃತ್ತದ ವ್ಯಾಪಾರಿ ಆನಂದ ಹೇಳಿದರು.

‘ರೇಸ್‌ಕೋರ್ಸ್ ರಸ್ತೆ ಮೂಲಕ ವಾಹನಗಳು ಬಸವೇಶ್ವರ ವೃತ್ತಕ್ಕೆ ಹೋಗುತ್ತವೆ. ಆನಂದರಾವ್ ವೃತ್ತದ ಮೂಲಕವೂ ಕೆಲ ವಾಹನಗಳು ಸಂಚರಿಸಿ ಉದ್ಯಾನ ಬಳಿ ರಸ್ತೆಗೆ ಸೇರುತ್ತವೆ. ಇಂಥ ಸಂದರ್ಭದಲ್ಲಿ ಬಳ್ಳಾರಿ ರಸ್ತೆ, ಅರಮನೆ ರಸ್ತೆ ಹಾಗೂ ಕೆ.ಆರ್‌. ವೃತ್ತದಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತದೆ. ಅಗ್ನಿಶಾಮಕ ದಳ ಠಾಣೆ, ಕಾರಾಗೃಹ ಇಲಾಖೆ ಕಚೇರಿ, ಮಹಾರಾಣಿ ಕಾಲೇಜು, ಚುನಾವಣಾ ಆಯೋಗ, ಕಾಲೇಜು ಶಿಕ್ಷಣ ಇಲಾಖೆ, ಜಾರಿ ನಿರ್ದೇಶನಾಲಯದ ಕಚೇರಿ ಹಾಗೂ ಇತರೆ ಸಂಸ್ಥೆಗಳು ಶೇಷಾದ್ರಿ ರಸ್ತೆಯಲ್ಲಿವೆ. ಇಲ್ಲಿಯ ಕೆಲಸಗಾರರು, ನಿತ್ಯವೂ ದಟ್ಟಣೆಯಿಂದಾಗಿ ಬೇಸತ್ತು ಹೋಗಿದ್ದಾರೆ’ ಎಂದರು. 

‘ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮೆಜೆಸ್ಟಿಕ್‌ ಸುತ್ತಲೂ ಸಂಚಾರ ದಟ್ಟಣೆ ಇರುತ್ತದೆ. ಹೊರ ಊರುಗಳಿಗೆ ಹೋಗಲು ರೈಲು ಮತ್ತು ಬಸ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಿರುವ ಪ್ರಯಾಣಿಕರು ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಆಗುವುದಿಲ್ಲ. ಆಟೊ, ಬಿಎಂಟಿಸಿ ಬಸ್‌ಗಳಲ್ಲಿ ರೈಲು ನಿಲ್ದಾಣ, ಮೆಜೆಸ್ಟಿಕ್‌ನತ್ತ ಹೋಗುವವರು ದಟ್ಟಣೆ ಉಂಟಾಗುವ ಕಾರಣ ಮಾರ್ಗ ಮಧ್ಯೆಯೇ ವಾಹನಗಳಿಂದ ಕೆಳಗಿಳಿದು, ನಿಲ್ದಾಣದತ್ತ ಹೆಜ್ಜೆ ಹಾಕುತ್ತಾರೆ’ ಎಂದು ಸಾರ್ವಜನಿಕರು ಆರೋಪಿಸಿದರು. 

ನಗರದ ಎಲ್ಲ ಪ್ರದೇಶಗಳಿಗೆ ಹಾಗೂ ಹೊರ ರಾಜ್ಯದ ಎಲ್ಲ ಭಾಗಗಳಿಗೆ ಮೆಜೆಸ್ಟಿಕ್‌ನಿಂದ ಬಸ್‌ ಸೇವೆ ಇದೆ. ನಿಲ್ದಾಣದಿಂದ ಹೊರಬರುವ ಬಹುತೇಕ ಬಸ್‌ಗಳು ಶೇಷಾದ್ರಿ ರಸ್ತೆ ಮೂಲಕ ಸಾಗುತ್ತವೆ. ದಟ್ಟಣೆ ಉಂಟಾದರೆ ಬಸ್‌ಗಳು ನಿಂತಲೇ ನಿಲ್ಲಬೇಕಾಗುತ್ತದೆ. ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು
ದೇವೇಂದ್ರ ನಾಯಕ್ ಆಟೊ ಡ್ರೈವರ್
ಮೆಜೆಸ್ಟಿಕ್‌ನಿಂದ ಓಕಳಿಪುರಂ ಜಂಕ್ಷನ್‌ಗೆ ಸಂರ್ಪಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ವಾಹನ ಸಂಚಾರ ನಿಧಾನವಾಗಿ ಸಂಚಾರ ದಟ್ಟಣೆ ಆಗುತ್ತಿದೆ. ಮೆಜೆಸ್ಟಿಕ್‌ನ ಧನ್ವಂತರಿ ರಸ್ತೆಯಲ್ಲಿ ಖಾಸಗಿ ಬಸ್‌ಗಳು ಲಗೇಜ್‌ ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುವುದರಿಂದ ರಾತ್ರಿ ಸಮಯದಲ್ಲಿ ವಿಪರೀತ ದಟ್ಟಣೆ ಆಗುತ್ತಿದೆ. ಸಂಚಾರ ವಿಭಾಗದ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು
ಶಿವರಾಜ ರಾಜಾಜಿನಗರ 

ಪಿಕ್‌ಅಪ್‌ ಡ್ರಾಪ್‌ನಿಂದ ಸಂಚಾರ ದಟ್ಟಣೆ

‘ಮೆಜೆಸ್ಟಿಕ್‌ನಿಂದ ಶೇಷಾದ್ರಿಪುರದ ಪ್ಲಾಟ್‌ಫಾರಂ ಮುಖ್ಯರಸ್ತೆಯ ಮೂಲಕ ಬಹುತೇಕ ಖಾಸಗಿ ಬಸ್‌ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುತ್ತವೆ. ಇಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪ್ರಾರಂಭಿಸಲಾಗಿದ್ದು ಒಂದು ಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಏಕಮುಖ ಸಂಚಾರದ ರಸ್ತೆಯಲ್ಲಿಯೇ ಖಾಸಗಿ ವಾಹನಗಳು ಸಂಚರಿಸುತ್ತಿದ್ದು ದಟ್ಟಣೆ ಆಗುತ್ತಿದೆ. ರಾತ್ರಿ 8.30ರ ನಂತರ ಪಿಕ್‌ಅಪ್‌ ಡ್ರಾಪ್‌ನಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ’ ಎನ್ನುತ್ತಾರೆ ಸಂಚಾರ ವಿಭಾಗದ ಪೊಲೀಸರು.

ದಟ್ಟಣೆ ಪ್ರದೇಶಗಳು 

  • ಆನಂದರಾವ್ ವೃತ್ತ

  • ಕೆ.ಆರ್. ವೃತ್ತ

  • ಶಿವಾನಂದ ವೃತ್ತ

  • ಸಂಗೊಳ್ಳಿ ರಾಯಣ್ಣ ವೃತ್ತ

  • ಓಕಳಿಪುರ ಜಂಕ್ಷನ್

  • ರಾಜೀವ್‌ಗಾಂಧಿ ವೃತ್ತ (ಸೆಂಟ್ರಲ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.