
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ತಿಗಳ ನೌಕರರ/ ವೃತ್ತಿಪರರ ಸಂಘವು ಭಾನುವಾರ ನಗರದಲ್ಲಿ ಆಯೋಜಿಸಿದ್ದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಹುಸ್ಕೂರಿನ ವೈದ್ಯ ವಿದ್ಯಾರ್ಥಿನಿ ಶಿಲ್ಪಾಶ್ರೀ ಅವರಿಗೆ ₹1 ಲಕ್ಷ ಸಹಾಯಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ‘ಹಿಂದುಳಿದ ವರ್ಗಗಳ ಇಲಾಖೆಯಿಂದ ₹5 ಲಕ್ಷದವರೆಗೆ ಹಣಕಾಸಿನ ನೆರವನ್ನು ಸಾಲದ ರೂಪದಲ್ಲಿ ಕೊಡಿಸುತ್ತೇನೆ. ಸಂಘವು ಇಂತಹ ಉತ್ತಮ ಕಾರ್ಯಗಳನ್ನು ಇನ್ನೂ ಹೆಚ್ಚಾಗಿ ಮಾಡಬೇಕು’ ಎಂದರು.
ಸಂಘದ ಸಲಹೆಗಾರ ರಾಜ್‌ಕೃಷ್ಣಮೂರ್ತಿ ಮಾತನಾಡಿ, ‘ಸಮುದಾಯದ ವಿದ್ಯಾವಂತ ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳವನ್ನು ಆಯೋಜಿಸಬೇಕು. ಇದಕ್ಕಾಗಿ ವಿವಿಧ ಕಂಪನಿಗಳ ಮಾಲೀಕರೊಂದಿಗೆ ಮಾತುಕತೆ ಮಾಡಬೇಕು’ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಲ್.ಎ. ಮಂಜುನಾಥ್ ಮಾತನಾಡಿ, ‘ಶಿಲ್ಪಾಶ್ರೀ ಅವರು ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರು. ನಂತರ ಆರ್ಥಿಕ ಸಹಾಯ ನೀಡುವಂತೆ ನಮ್ಮ ಸಂಘಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪರಿಗಣಿಸಿ, ₹1 ಲಕ್ಷ ಸಹಾಯಧನ ನೀಡಲಾಗಿದೆ’ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಮುನಿರಾಜಪ್ಪ, ಖಜಾಂಚಿ ರಾಜಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.