ADVERTISEMENT

ಮಹಿಳೆ ಕೊಲೆ ಮಾಡಿ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಿಟ್ಟು ಪರಾರಿಯಾದ ದುಷ್ಕರ್ಮಿಗಳು

ಆರೋಪಿ ಪತ್ತೆಗೆ ಶೋಧ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 22:39 IST
Last Updated 29 ಜೂನ್ 2025, 22:39 IST
ಮಹಿಳೆಯ ಮೃತದೇಹ ಪತ್ತೆಯಾದ ಬಿಬಿಎಂಪಿ ಕಸದ ಲಾರಿ.
ಮಹಿಳೆಯ ಮೃತದೇಹ ಪತ್ತೆಯಾದ ಬಿಬಿಎಂಪಿ ಕಸದ ಲಾರಿ.    

ಬೆಂಗಳೂರು: ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಮೂಟೆಕಟ್ಟಿ ಬಿಬಿಎಂಪಿ ಕಸದ ಲಾರಿಯಲ್ಲಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ನಡೆದಿದೆ.

ಸುಮಾರು 30–35 ವರ್ಷದ ಮಹಿಳೆಯ ಮೃತದೇಹವನ್ನು ಶನಿವಾರ ತಡರಾತ್ರಿ ಆಟೊದಲ್ಲಿ ತಂದ ದುಷ್ಕರ್ಮಿಗಳು, ಮೈದಾನ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿರಿಸಿ ಪರಾರಿಯಾಗಿದ್ದಾರೆ.

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.  

ADVERTISEMENT

ಸ್ಥಳೀಯ ವ್ಯಕ್ತಿಯೊಬ್ಬರು ಕಸ ಹಾಕಲು ಬಂದಿದ್ದ ವೇಳೆ ಮಹಿಳೆಯ ತಲೆ ಕೂದಲು ಕಾಣಿಸಿದೆ. ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಹಾಗೂ ಪೊಲೀಸರು ಭೇಟಿ ನೀಡಿ, ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸಿದರು.

ಮೃತದೇಹ ಪತ್ತೆಯಾದ ಸ್ಥಳ, ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ, ಸ್ಕೇಟಿಂಗ್ ಮೈದಾನ ಸೇರಿದಂತೆ ಇತರೆ ಕಡೆಗಳಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದರು.  

ಈ ಪ್ರದೇಶದಲ್ಲಿ ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇರುವುದನ್ನು ಗಮನಿಸಿ, ಬೇರೆ ಕಡೆ ಕೊಲೆ ಮಾಡಿ, ಆಟೊದಲ್ಲಿ ಶವವನ್ನು ತಂದು ಇಲ್ಲಿ ಎಸೆದು ಹೋಗಿರಬಹುದು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

‘ಮಹಿಳೆಯ ಮೃತದೇಹ ಕಸದ ಲಾರಿಯಲ್ಲಿ ಪತ್ತೆಯಾಗಿದ್ದು, ವಿಳಾಸ ತಿಳಿದು ಬಂದಿಲ್ಲ. ಕೊಲೆಗೆ ಕಾರಣ, ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.