
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಗನ ಭೇಟಿಗೆ ಬಂದಿದ್ದ ತಾಯಿಯ ಬಳಿ ಮೊಬೈಲ್ ಪತ್ತೆಯಾಗಿದ್ದು, ಈ ಸಂಬಂಧ ಮಹಿಳೆ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಚಾರಣಾಧೀನ ಕೈದಿ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದರು. ತಪಾಸಣೆ ವೇಳೆ ಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದು ಪತ್ತೆಯಾಗಿದೆ.
‘ಕಾರಾಗೃಹದ ಮುಖ್ಯದ್ವಾರದ ಹೊರಗೆ ಎಡಭಾಗದಲ್ಲಿ ಇರುವ ತಪಾಸಣಾ ವಿಭಾಗ-01ರಲ್ಲಿ (ಸಾಮಾನ್ಯ ಸಂದರ್ಶನ ವಿಭಾಗ) ಜನವರಿ 2ರಂದು ಮಧ್ಯಾಹ್ನ 12.10ಕ್ಕೆ ಮಗನ ಭೇಟಿಗೆ ಬಂದ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ, ನೀಲಿ ಬಣ್ಣದ ಮೊಬೈಲ್ ಪತ್ತೆ ಆಗಿದೆ. ಮಹಿಳೆಯು ಕಾರಾಗೃಹದ ನಿಯಮ ಉಲ್ಲಂಘನೆ ಮಾಡಿ ಕೆಎಸ್ಐಎಸ್ಎಫ್ ಸಿಬ್ಬಂದಿ ಅವರ ಕಣ್ತಪ್ಪಿಸಿ ನಿಷೇಧಿತ ವಸ್ತು ಸಾಗಿಸಲು ಪ್ರಯತ್ನಿಸಿರುವುದರಿಂದ ಲಕ್ಷ್ಮೀ ನರಸಮ್ಮ ಮತ್ತು ಭರತ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಎಚ್.ಎ. ಪರಮೇಶ್ ನೀಡಿರುವ ದೂರನ್ನು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.