ADVERTISEMENT

‘ಚಿಕಿತ್ಸೆ’ಗಾಗಿ ಕಾದಿವೆ ನಮ್ಮ ಕ್ಲಿನಿಕ್

ರೋಗಿಗಳ ಕೊರತೆಯಿಂದ ಬಳಲಿದ ಚಿಕಿತ್ಸಾ ಕೇಂದ್ರಗಳು *ಚಿಕಿತ್ಸೆಗಿಂತ ಮಾತ್ರೆಗೆ ಬರುವವರೇ ಅಧಿಕ

ವರುಣ ಹೆಗಡೆ
Published 31 ಡಿಸೆಂಬರ್ 2025, 21:07 IST
Last Updated 31 ಡಿಸೆಂಬರ್ 2025, 21:07 IST
ಕಾಮಾಕ್ಯದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ವೃದ್ಧೆಯೊಬ್ಬರು ಚಿಕಿತ್ಸೆಗಾಗಿ ಕಾದು ಕುಳಿತಿರುವುದು -ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ಕಾಮಾಕ್ಯದಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ವೃದ್ಧೆಯೊಬ್ಬರು ಚಿಕಿತ್ಸೆಗಾಗಿ ಕಾದು ಕುಳಿತಿರುವುದು -ಪ್ರಜಾವಾಣಿ ಚಿತ್ರಗಳು/ ರಂಜು ಪಿ.   

ಬೆಂಗಳೂರು: ವೈದ್ಯರು ನಿಯಮಿತವಾಗಿ ಲಭ್ಯವಾಗುವ ಕಡೆ ರೋಗಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿಲ್ಲ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಡೆ ವೈದ್ಯರೇ ದೊರೆಯುತ್ತಿಲ್ಲ. ವೈದ್ಯರು ಹಾಗೂ ರೋಗಿಗಳು ಇರುವ ಕಡೆ ಚಿಕಿತ್ಸೆಗೆ ಅಗತ್ಯ ಮೂಲಸೌಕರ್ಯವೇ ಇಲ್ಲ. 

ಇದು ಜಿಬಿಎ ವ್ಯಾಪ್ತಿಯಲ್ಲಿ ಇರುವ ‘ನಮ್ಮ ಕ್ಲಿನಿಕ್‌’ಗಳ ಸ್ಥಿತಿ. ಜನರ ಸಮಗ್ರ ಆರೋಗ್ಯ ವೃದ್ಧಿಗೆ ವಾರ್ಡ್‌ ಮಟ್ಟದಲ್ಲಿ ಪ್ರಾರಂಭಿಸಲಾದ ಈ ಕೇಂದ್ರಗಳಿಗೆ ಚಿಕಿತ್ಸೆಗೆ ಬರುವವರಿಗಿಂತ, ಮಾತ್ರೆಗಳನ್ನು ಪಡೆದುಕೊಳ್ಳಲು ಭೇಟಿ ನೀಡುವವರೇ ಅಧಿಕ. ಅದರಲ್ಲೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಮಾತ್ರೆ ‍ಪಡೆಯುತ್ತಿದ್ದಾರೆ. ಇದರಿಂದಾಗಿ ನಮ್ಮ ಕ್ಲಿನಿಕ್‌ಗಳು ಚಿಕಿತ್ಸೆಯ ಬದಲು, ಔಷಧಗಳನ್ನು ವಿತರಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಸದ್ಯ ನಗರದಲ್ಲಿ 243 ‘ನಮ್ಮ ಕ್ಲಿನಿಕ್‌’ಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್‌ಗಳು ತಲಾ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞರು ಹಾಗೂ ಡಿ ದರ್ಜೆ ಸಿಬ್ಬಂದಿಯನ್ನು ಒಳಗೊಂಡಿವೆ. ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿವೆ. ಮಧ್ಯಾಹ್ನ 1.30ರಿಂದ 2 ಗಂಟೆವರೆಗೆ ಊಟದ ವಿರಾಮ ಇರಲಿದೆ. ಕೆಲ ಕ್ಲಿನಿಕ್‌ಗಳಲ್ಲಿ ಈ ಊಟದ ವಿರಾಮ ಕಡಿತಮಾಡಿ, ಸಂಜೆ 4 ಗಂಟೆವರೆಗೆ ಸೇವೆ ಒದಗಿಸಲಾಗುತ್ತಿದೆ. ಈ ಕ್ಲಿನಿಕ್‌ಗಳಿಗೆ ಭೇಟಿ ನೀಡುವವರ ಸಂಖ್ಯೆ ಮಧ್ಯಾಹ್ನವಾದರೂ ಎರಡಂಕಿ ದಾಟುತ್ತಿಲ್ಲ. ಇದರಿಂದಾಗಿ ವೈದ್ಯರು ಹಾಗೂ ಶುಶ್ರೂಷಕರು ರೋಗಿಗಳಿಗಾಗಿ ಎದುರು ನೋಡುತ್ತಾ ಕಾಲಹರಣ ಮಾಡುವ ಸ್ಥಿತಿ ನಿರ್ಮಾಣವಾಗಿದೆ. 

ADVERTISEMENT

2022ರ ಫೆಬ್ರವರಿ ತಿಂಗಳಲ್ಲಿ ಮೊದಲ ಹಂತದಲ್ಲಿ 108 ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿವೆ. ಈ ಕ್ಲಿನಿಕ್‌ಗಳನ್ನು ಜಿಬಿಎ (ಈ ಹಿಂದೆ ಬಿಬಿಎಂಪಿ) ವ್ಯಾಪ್ತಿಯಲ್ಲಿ ಖಾಲಿ ಇರುವ ಕಟ್ಟಡಗಳಲ್ಲಿ ಪ್ರಾರಂಭಿಸಲಾಗಿದೆ. ನಗರದ ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಈ ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ.

ಸಂದಿಗೊಂದಿಯಲ್ಲಿ ಕ್ಲಿನಿಕ್‌: ಚಾಮರಾಜಪೇಟೆ, ಪದ್ಮನಾಭನಗರ, ಬಸವನಗುಡಿ, ಶಿವಾಜಿನಗರ, ಚಿಕ್ಕಪೇಟೆ, ಜಯನಗರ, ಮಹದೇವಪುರ, ಯಲಹಂಕ ಸೇರಿ ಬಹುತೇಕ ಕಡೆ ಮುಖ್ಯ ರಸ್ತೆಗಳ ಅಕ್ಕಪಕ್ಕದಲ್ಲಿ ಈ ಕ್ಲಿನಿಕ್‌ಗಳಿಲ್ಲ. ಸಂದಿಗೊಂದಿಯಲ್ಲಿ ಕ್ಲಿನಿಕ್‌ಗಳು ಇರುವ ಕಾರಣ ಈ ಚಿಕಿತ್ಸಾ ಕೇಂದ್ರದ ಬಗ್ಗೆ ಬಹುತೇಕ ಸ್ಥಳೀಯರಿಗೆ ಮಾಹಿತಿಯೇ ಇಲ್ಲವಾಗಿದೆ. ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡು ಇರದಿರುವುದು, ಪ್ರವೇಶ ದ್ವಾರ ಹಿಂಭಾಗದಲ್ಲಿ ಇರುವುದು ಸೇರಿ ವಿವಿಧ ಕಾರಣದಿಂದ ಈ ಕ್ಲಿನಿಕ್‌ಗಳು ಜನಮನ್ನಣೆ ಪಡೆಯುವಲ್ಲಿ ವಿಫಲವಾಗಿವೆ.    

‘ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಮಾತ್ರೆಗಳನ್ನು ಪಡೆಯಲು ನಮ್ಮ ಕ್ಲಿನಿಕ್‌ಗಳು ಸಹಕಾರಿಯಾಗಿವೆ. ಜ್ವರ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳ ಸಂಬಂಧ ಭೇಟಿ ನೀಡಿದಾಗ ಮಾತ್ರೆಗಳು ದೊರೆಯುತ್ತಿವೆ. ಆದರೆ, ಎಲ್ಲ ಸಂದರ್ಭದಲ್ಲಿ ವೈದ್ಯರು ಕರ್ತವ್ಯದಲ್ಲಿ ಇರುವುದಿಲ್ಲ. ಇದ್ದರೂ ದೂರದಿಂದಲೇ ಅನಾರೋಗ್ಯ ಸಮಸ್ಯೆ ಬಗ್ಗೆ ಆಲಿಸುತ್ತಾರೆ. ಸ್ಪರ್ಶಿಸಿ ಪರೀಕ್ಷೆ ಮಾಡುವುದಿಲ್ಲ. ಶುಶ್ರೂಷಕರೇ ವಿಚಾರಿಸಿ ಮಾತ್ರೆಗಳನ್ನು ನೀಡುತ್ತಾರೆ. ಹೀಗಾಗಿ, ಜ್ವರ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದೇವೆ’ ಎಂದು ನಮ್ಮ ಕ್ಲಿನಿಕ್‌ಗೆ ಮಾತ್ರೆಗಳನ್ನು ಪಡೆಯಲು ಬಂದವರು ತಿಳಿಸಿದರು. 

‘ನಮ್ಮ ಕ್ಲಿನಿಕ್‌ಗಳಲ್ಲಿ ಮಧುಮೇಹ ಸೇರಿ ವಿವಿಧ ಸಮಸ್ಯೆಗಳಿಗೆ ಮಾತ್ರೆಗಳು ನಿಯಮಿತವಾಗಿ ದೊರೆಯುತ್ತಿಲ್ಲ. ವೈದ್ಯರು ಕೂಡ ವಾರದ ಕೆಲ ದಿನ ಆಸ್ಪತ್ರೆಯಲ್ಲಿ ಕಾಣಿಸುವುದಿಲ್ಲ’ ಎಂದು ಚಾಮರಾಜಪೇಟೆಯ ನಿವಾಸಿಯೊಬ್ಬರು ದೂರಿದರು.

‘ಈ ಕ್ಲಿನಿಕ್‌ಗಳಲ್ಲಿ ಪ್ರತಿ ಗುರುವಾರ ಮಕ್ಕಳಿಗೆ ವಿವಿಧ ಲಸಿಕೆಗಳನ್ನು ಹಾಕಲಾಗುತ್ತಿದೆ. ಆದರೆ, ಪ್ರಚಾರದ ಕೊರತೆಯಿಂದಾಗಿ ಮಕ್ಕಳನ್ನು ಕರೆತರುವ ತಾಯಂದಿರ ಸಂಖ್ಯೆಯೂ ಬೆರಳಣಿಕೆಯಷ್ಟು’ ಎಂದು ಕ್ಲಿನಿಕ್‌ಗಳ ಸಿಬ್ಬಂದಿಯೇ ಹೇಳುತ್ತಾರೆ. 

ಹೊಸಕೆರೆಹಳ್ಳಿ ವಾರ್ಡ್‌ನ ನಮ್ಮ ಕ್ಲಿನಿಕ್‌ನಲ್ಲಿ ಮಾತ್ರೆ ಪಡೆದು ತೆರಳುತ್ತಿರುವ ಜನರು
ಯಡಿಯೂರು ವಾರ್ಡ್‌ನಲ್ಲಿರುವ ನಮ್ಮ ಕ್ಲಿನಿಕ್‌ನ ಗೇಟ್‌ಗೆ ಬೀಗ ಹಾಕಿರುವುದು
ನಮ್ಮ ಏರಿಯಾದಲ್ಲಿಯೂ ನಮ್ಮ ಕ್ಲಿನಿಕ್‌ ಇದೆ ಎನ್ನುವುದೇ ತಿಳಿದಿರಲಿಲ್ಲ. ಸಿಬ್ಬಂದಿಯೇ ನನ್ನನ್ನು ಕರೆತಂದು ಅಧಿಕ ರಕ್ತದೊತ್ತಡ ಮಧುಮೇಹ ಪರೀಕ್ಷೆ ಮಾಡಿಸಿದರು
ಚೆಲುವರಾಜ್ ಇಟ್ಟಮಡು ನಿವಾಸಿ
ಈ ಕ್ಲಿನಿಕ್‌ಗಳಲ್ಲಿ ವೈದ್ಯರು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಆಗ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮಾತ್ರೆಗಳಿಗೆ ಸಹಕಾರಿಯಾಗಿದೆ
ರುದ್ರಪ್ಪ ಬನಶಂಕರಿ ನಿವಾಸಿ

ಜನರನ್ನು ಕರೆತರುವ ಸಿಬ್ಬಂದಿ

ನಿಗದಿತ ಸಂಖ್ಯೆಯಲ್ಲಿ ರೋಗಿಗಳು ಕ್ಲಿನಿಕ್‌ಗೆ ಬರದ ಪರಿಣಾಮ ಕ್ಲಿನಿಕ್‌ ಸಿಬ್ಬಂದಿಯೇ ಜನರನ್ನು ಕರೆತಂದು ಅಧಿಕ ರಕ್ತದೊತ್ತಡ ಮಧುಮೇಹದ ಪರೀಕ್ಷೆ ನಡೆಸುತ್ತಿದ್ದಾರೆ. ಅಗತ್ಯ ಇದ್ದವರಿಗೆ ಮಾತ್ರೆಗಳನ್ನೂ ನೀಡುತ್ತಿದ್ದಾರೆ. ಜನರು ಅಧಿಕ ಸಂಖ್ಯೆಯಲ್ಲಿ ಸೇರುವ ಉದ್ಯಾನ ದೇವಸ್ಥಾನ ಸೇರಿ ಸುತ್ತಮುತ್ತಲಿನ ಸ್ಥಳಗಳಲ್ಲಿಯೂ ಸಿಬ್ಬಂದಿ ಈ ಪರೀಕ್ಷೆ ಮಾಡಿಸಿ ಅಗತ್ಯ ಸಲಹೆ ನೀಡುತ್ತಿದ್ದಾರೆ. ಈ ಮೂಲಕ ನಿಗದಿತ ಸಂಖ್ಯೆಯ ಗುರಿಯನ್ನು ತಲುಪುತ್ತಿದ್ದಾರೆ.

ಕತ್ತಲೆಯಲ್ಲಿ ಕಾರ್ಯನಿರ್ವಹಣೆ

ಬಸವನಗುಡಿಯ ನಮ್ಮ ಕ್ಲಿನಿಕ್‌ ಸೇರಿ ಕೆಲವೆಡೆ ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಕ‌ತ್ತಲೆಯಲ್ಲಿ ಸೇವೆ ಒದಗಿಸಬೇಕಾದ ಸ್ಥಿತಿಯಿದೆ. ಯುಪಿಎಸ್ ಬ್ಯಾಟರಿ ಒದಗಿಸದ ಪರಿಣಾಮ ಅಲ್ಲಿ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಚಿಕಿತ್ಸೆಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.  ಬದಲಾಗದ ಸಮಯ ಸಂಜೆ 4.30ಕ್ಕೆ ಈ ಕ್ಲಿನಿಕ್‌ಗಳು ಬಂದ್ ಆಗುತ್ತಿರುವ ಕಾರಣ ಕೂಲಿ ಕಾರ್ಮಿಕರು ಹಾಗೂ ಉದ್ಯೋಗಸ್ಥರಿಗೆ ಪರೀಕ್ಷೆ ಹಾಗೂ ಮಾತ್ರೆಗಳ ಸಂಬಂಧ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಾಯೋಗಿಕವಾಗಿ ಶೇ 25 ರಷ್ಟು ‘ನಮ್ಮ ಕ್ಲಿನಿಕ್‌’ಗಳ ಅವಧಿಯನ್ನು ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯವರೆಗೆ ಬದಲಾಯಿಸುವ ಪ್ರಸ್ತಾವ ಆರೋಗ್ಯ ಇಲಾಖೆಯ ಮುಂದಿತ್ತು. ಆದರೆ ಇದು ಕಾರ್ಯಗತವಾಗದ ಪರಿಣಾಮ ಕಾರ್ಮಿಕರು ಹಾಗೂ ಉದ್ಯೋಗಸ್ಥರಿಗೆ ಈ ಕ್ಲಿನಿಕ್‌ಗಳ ಪ್ರಯೋಜನ ಪಡೆಯುವುದು ಕಷ್ಟಸಾಧ್ಯವಾಗಿದೆ. 

ವೈದ್ಯರು ಸಿಬ್ಬಂದಿ ಅಲಭ್ಯ

ಕೆಲವೆಡೆ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಅಲಭ್ಯರಾಗುತ್ತಿರುವುದು ನಮ್ಮ ಕ್ಲಿನಿಕ್‌ಗಳ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗಿದೆ. ‘ವೈದ್ಯರು ಕ್ಷೇತ್ರಕಾರ್ಯದಲ್ಲಿ ಇದ್ದಾರೆ’ ಎಂದು ತಿಳಿಸುವ ಶುಶ್ರೂಷಕರು ಅಗತ್ಯ ಮಾತ್ರೆಗಳನ್ನು ರೋಗಿಗಳಿಗೆ ನೀಡುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ತಾವೇ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಸಲಹೆ ಅನುಸಾರ ಔಷಧಗಳನ್ನು ಸೂಚಿಸುತ್ತಿದ್ದಾರೆ.  ರೋಗಿಗಳು ಇಲ್ಲದ ಸಂದರ್ಭದಲ್ಲಿ ಶುಶ್ರೂಷಕರು ಹಾಗೂ ಸಿಬ್ಬಂದಿ ಚಹಾ–ಕಾಫಿಗೆ ಹೊರಗಡೆ ತೆರಳುತ್ತಿದ್ದು ಕ್ಲಿನಿಕ್‌ಗೆ ಭೇಟಿ ನೀಡಿದ ಕೆಲವರು ವಾಪಸ್ ಮರಳಬೇಕಾದ ಸ್ಥಿತಿಯೂ ನಿರ್ಮಾಣವಾಗುತ್ತಿದೆ. 

‘ಜನರಿಗೆ ಮಾಹಿತಿ ಕೊರತೆ’

‘ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಉಚಿತವಾಗಿ ಔಷಧವನ್ನೂ ಒದಗಿಸಲಾಗುತ್ತಿದೆ. ಮಧುಮೇಹದಂತಹ ದೀರ್ಘಾವಧಿ ಸಮಸ್ಯೆಗಳಿಗೂ ಮಾತ್ರೆಗಳನ್ನು ನೀಡಲಾಗುತ್ತಿದೆ. ಮಾಹಿತಿ ಕೊರತೆಯಿಂದ ರೋಗಿಗಳು ಕ್ಲಿನಿಕ್‌ಗಳಿಗೆ ಅಷ್ಟಾಗಿ ಬರುತ್ತಿಲ್ಲ’ ಎಂದು ಹೊಸಕೆರೆಹಳ್ಳಿಯ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ. ಪದ್ಮಾ ಹೇಳಿದರು. ‘ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ ಇನ್ನಷ್ಟು ಸೌಲಭ್ಯ ಹಾಗೂ ಸ್ಥಳಾವಕಾಶ ಕೇಳಬಹುದು’ ಎಂದು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್‌ನ ವೈದ್ಯರೊಬ್ಬರು ತಿಳಿಸಿದರು. ‘ಮುಖ್ಯ ರಸ್ತೆಗಳು ಉದ್ಯಾನಗಳ ಅಕ್ಕಪಕ್ಕ ಸ್ಥಾಪಿಸಿದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ವೃದ್ಧರು ಮಾತ್ರ ವಿವಿಧ ಮಾತ್ರೆಗಳನ್ನು ಪಡೆಯಲು ಭೇಟಿ ನೀಡುತ್ತಿದ್ದಾರೆ’ ಎಂದು ಜಯನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ನಮ್ಮ ಕ್ಲಿನಿಕ್‌ನ ಶುಶ್ರೂಷಕಿ ಅಭಿಪ್ರಾಯಪಟ್ಟರು.

ಏನೆಲ್ಲ ಸೇವೆ ಲಭ್ಯ?

l ಗರ್ಭಿಣಿ ಮತ್ತು ಜನನ ಸಮಯದ ಆರೈಕೆ

l ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ರಕ್ಷಣೆ

l ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆ

l ಸಾರ್ವತ್ರಿಕ ಲಸಿಕಾಕರಣ ಸೇವೆ

l ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆ 

l ಸಾಂಕ್ರಾಮಿಕ ರೋಗಗಳ ನಿರ್ವಹಣೆ

l ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಹೊರರೋಗಿ ಸೇವೆ

l ಬಾಯಿ ಆರೋಗ್ಯ ಸೇವೆ, ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೋಗ್ಯ ಆರೈಕೆ

l ಮಾನಸಿಕ ಆರೋಗ್ಯ ಸೇವೆ, ವೃದ್ಧಾಪ್ಯ ಆರೈಕೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.