ADVERTISEMENT

ನಮ್ಮ ಮೆಟ್ರೊ: ನಾಯಂಡಹಳ್ಳಿ– ಕೆಂಗೇರಿ ಮಾರ್ಗದಲ್ಲಿ ಜುಲೈನಿಂದ ಸಂಚಾರ

ನಮ್ಮ ಮೆಟ್ರೊ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 18:24 IST
Last Updated 9 ಜೂನ್ 2021, 18:24 IST
ನಾಯಂಡಳ್ಳಿ ಮೆಟ್ರೊ ನಿಲ್ದಾಣ
ನಾಯಂಡಳ್ಳಿ ಮೆಟ್ರೊ ನಿಲ್ದಾಣ   

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮೆಟ್ರೊ ರೈಲು ಮಾರ್ಗವನ್ನು ಜುಲೈ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ತಮ್ಮ ಗೃಹ ಕಚೇರಿ ‘ಕೃಷ್ಣಾ‘ದಲ್ಲಿ ಬುಧವಾರ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮತ್ತು ಉಪನಗರ ರೈಲು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಯಲಚೇನಹಳ್ಳಿ– ರೇಷ್ಮೆ ಸಂಸ್ಥೆ ಮಾರ್ಗವನ್ನು ಜನವರಿಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ನಾಯಂಡಹಳ್ಳಿ– ಕೆಂಗೇರಿ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತ್ವರಿತವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದರು.

‘ನಮ್ಮ ಮೆಟ್ರೊ’ 2, 2ಎ ಮತ್ತು 2ಬಿ ಹಂತದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಬಿಎಂಆರ್‌ಸಿಎಲ್‌ ಅಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆಸಬೇಕು. ಮೆಟ್ರೊ ರೈಲು ಮಾರ್ಗಗಳಲ್ಲಿ ಲಭ್ಯವಿರುವ ವಾಣಿಜ್ಯ ಪ್ರದೇಶಗಳು ಮತ್ತು ನಿಲ್ದಾಣಗಳ ಸ್ಥಳಗಳನ್ನು ಲಾಭದಾಯಕವಾಗಿ ಬಳಸಿಕೊಳ್ಳಬೇಕು‘ ಎಂದು ಸೂಚಿಸಿದರು.

ADVERTISEMENT

ಕಾಲಮಿತಿ ಪಾಲಿಸಲು ತಾಕೀತು: ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ಉಪನಗರ ರೈಲು ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಬೇಕು. ಬೈಯಪ್ಪನಹಳ್ಳಿ– ಬಾಣಾವರ ನಡುವಿನ 25.01 ಕಿ.ಮೀ. ಉದ್ದದ ಉಪನಗರ ರೈಲು ಮಾರ್ಗದ ಕಾಮಗಾರಿಯ ಟೆಂಡರ್‌ ಅಕ್ಟೋಬರ್‌ ವೇಳೆ ಪೂರ್ಣಗೊಳಿಸಬೇಕು. ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರೈಲ್ವೆ ಮಾರ್ಗಗಳ ದ್ವಿಪಥ ನಿರ್ಮಾಣ ಯೋಜನೆಯಡಿ ಬೈಯಪ್ಪನಹಳ್ಳಿ– ಹೊಸೂರು (48 ಕಿ.ಮೀ.), ಯಶವಂತಪುರ– ಚನ್ನಸಂದ್ರ (21.70 ಕಿ.ಮೀ.) ಕಾಮಗಾರಿಗಳು ಪ್ರಗತಿಯಲ್ಲಿವೆ. ₹ 323 ಕೋಟಿ ಮೊತ್ತದ ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದೆ. 45 ಲಕ್ಷ ಘನ ಮೀಟರ್‌ ಪ್ರದೇಶದಲ್ಲಿ ಸಮತಟ್ಟು ಕೆಲಸ ನಡೆದಿದೆ. 12 ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದು, 20 ಸೇತುವೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬಕ್ಕೆ ಅಸಮಾಧಾನ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಯೋಜನೆಯ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಅಡಿಯಲ್ಲಿ 27 ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಮೇ 31ರೊಳಗೆ ಎಲ್ಲವನ್ನೂ ಪೂರ್ಣಗೊಳಿಸುವಂತೆ ಸೂಚಿಸಿದ್ದೆ. ಎಲ್ಲ ಕಡೆಯೂ ಕೆಲಸ ಕುಂಟುತ್ತಾ ಸಾಗಿದೆ. ಮಳೆಗಾಲ ಆರಂಭವಾಗಿದೆ. ಇನ್ನು ಯಾವಾಗ ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

‘ಮಿನ್ಕ್ಸ್‌ ವೃತ್ತ, ಬಾಲಬ್ರೂಯಿ ಅತಿಥಿಗೃಹದಿಂದ ಮಾಣಿಕ್ಯವೇಲು ಮ್ಯಾನ್ಷನ್‌ ವೃತ್ತ, ವಸಂತನಗರದಿಂದ ಬಸವೇಶ್ವರ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ವಿಳಂಬದಿಂದ ಜನರು ನಡೆದಾಡುವುದೂ ಕಷ್ಟವಾಗಿದೆ. ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಷ್ಟು ದಿನ ಸಮಯ ಬೇಕು’ ಎಂದು ಸ್ಮಾರ್ಟ್‌ ಸಿಟಿ ಮುಖ್ಯ ಎಂಜಿನಿಯರ್‌ ಅವರನ್ನು ಕೇಳಿದರು.

ಜೂನ್‌ 30ರೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸುವುದಾಗಿ ಮುಖ್ಯ ಎಂಜಿನಿಯರ್‌ ಉತ್ತರಿಸಿದರು. ತ್ವರಿತವಾಗಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.