
ಬೆಂಗಳೂರು: ‘ಹೊಸ ವರ್ಷಾಚರಣೆಯ ವೇಳೆ ಮದ್ಯದ ನಶೆ ಏರಿಸಿಕೊಂಡವರನ್ನು ಅವರವರ ಮನೆಗಳಿಗೆ ತಲುಪಿಸುವುದಿಲ್ಲ. ಅತಿಯಾಗಿ ಮದ್ಯ ಸೇವಿಸಿಕೊಂಡು ನಡೆದುಕೊಂಡು ಹೋಗಲು ಸಾಧ್ಯ ಆಗದವರು ಹಾಗೂ ಪ್ರಜ್ಞೆ ಕಳೆದುಕೊಂಡವರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮಹಿಳೆಯರು ಅತಿಯಾದ ಮದ್ಯಪಾನ ಮಾಡಿ ಪ್ರಜ್ಞೆ ಇಲ್ಲದಂತೆ ಇದ್ದರೆ, ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಮಾತ್ರ ಆದ್ಯತೆ ಮೇರೆಗೆ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿ ತಲುಪಿಸುವುದಕ್ಕೂ ಮೊದಲು ವಿಶ್ರಾಂತಿ ಸ್ಥಳಗಳಿಗೆ ಕರೆದೊಯ್ಯಲಾಗುವುದು, ಅಲ್ಲಿ ವೈದ್ಯರು, ನರ್ಸ್‌ಗಳು ಪರೀಕ್ಷಿಸಿದ ಬಳಿಕ ಅವರನ್ನು ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ನಗರದ ವಿವಿಧೆಡೆ 15 ವಿಶ್ರಾಂತಿ ಸ್ಥಳಗಳನ್ನು ಗುರುತಿಸಲಾಗಿದೆ’ ಎಂದರು.
‘ಮದ್ಯಪಾನ ಮಾಡಿದ ಸಂದರ್ಭದಲ್ಲಿ ಯಾವ ರೀತಿ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆ ಸಮಯದಲ್ಲಿ ಏನು ಬೇಕಾದರೂ ಆಗಬಹುದು, ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆ ಇದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸಿಬ್ಬಂದಿಗೆ ತಿಳಿಸಲಾಗಿದೆ. ಬಾರ್, ಪಬ್ ತೆರೆದಿಡಲು ಸಮಯ ನಿಗದಿ ಮಾಡಲಾಗಿದೆ. ರಾತ್ರಿ ಒಂದು ಗಂಟೆಗೆ ಎಲ್ಲ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದಿದ್ದರೆ ಪ್ರಕರಣ ದಾಖಲಿಸಲಾಗುವುದು’ ಎಂದರು.
‘ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಬೆಂಗಳೂರಿಗೆ ಬಹಳಷ್ಟು ಜನರು ಹೊರಗಿನಿಂದ ಬರುತ್ತಾರೆ. ಸಂಭ್ರಮಾಚರಣೆ ಮಾಡಿ ಮದ್ಯಪಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚು ಜನರು ಸೇರಿದಾಗ ತಳ್ಳಾಟ- ನೂಕಾಟ ಆಗಲಿದೆ. ಅದಕ್ಕಾಗಿ ಹೆಚ್ಚು ಗಮನಹರಿಸಿದ್ದೇವೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.