ಡಿ.ಕೆ. ಶಿವಕುಮಾರ್
ಬೆಂಗಳೂರು: ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ–ಖಾತಾಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ, ಇ–ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಖಾತಾ ಪರಿವರ್ತನೆ ಮಾಡಿಸಿಕೊಂಡವರಿಗೆ ಸೋಮವಾರ ಖಾತಾ ಪತ್ರ ವಿತರಣೆ ಮಾಡಿ ಅವರು ಸುದ್ದಿಗಾರರರೊಂದಿಗೆ ಜತೆ ಮಾತನಾಡಿದರು.
‘ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ–ಖಾತೆ ವ್ಯವಸ್ಥೆ ತರಲು ಉದ್ದೇಶಿಸಿದ್ದೇವೆ. ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ವೇರ್‌ನಲ್ಲಿ ದಾಖಲೆಗಳು ಆಧಾರ್ ಜೊತೆ ಲಿಂಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
‘ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಮೂಲಕ ಬಿ ಖಾತಾದಿಂದ ಎ ಖಾತೆ ನೀಡಲಾಗುತ್ತದೆ. ಈಗಾಗಲೇ ಏಳು ಸಾವಿರ ಅರ್ಜಿಗಳು ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಖಾತಾ ನೀಡಲು ಸಮಯ ನಿಗದಿಪಡಿಸಲಾಗಿದೆ ಎಂದರು.
‘ಅನೇಕರು ಕ್ರಯಪತ್ರ ಮಾತ್ರ ಹೊಂದಿದ್ದು, ಖಾತೆಯನ್ನೇ ಪಡೆದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.
ಒಂದೇ ದಿನ 17 ಸಾವಿರ ನಿವೇಶನ ಹಂಚಿಕೆ
‘ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಾಲಯ ತಿಳಿಸಿದೆ. 34,977 ನಿವೇಶನ ರಚಿಸಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ 75ರಷ್ಟು ಮಾಲೀಕರು ಇದಕ್ಕೆ ತಯಾರಿದ್ದಾರೆ. ಮಿಕ್ಕ ಮಾಲೀಕರ ಬಳಿ ನಾನು ಮನವಿ ಮಾಡುತ್ತಿದ್ದೇನೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು, 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಉಳಿದ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.