ADVERTISEMENT

ಏಪ್ರಿಲ್‌ ತಿಂಗಳ ವೇತನಕ್ಕಾಗಿ ಅನುದಾನ ಕೋರಿದ ಇಲಾಖೆ: ಸಾರಿಗೆ ನೌಕರರಿಗಿಲ್ಲ ಸಂಬಳ

​ಪ್ರಜಾವಾಣಿ ವಾರ್ತೆ
Published 14 ಮೇ 2021, 21:32 IST
Last Updated 14 ಮೇ 2021, 21:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ಇದುವರೆಗೂ ಏಪ್ರಿಲ್ ತಿಂಗಳ ಸಂಬಳ ಪಾವತಿಯಾಗಿಲ್ಲ. ಈ ಬಗ್ಗೆ ನೌಕರರು ಪ್ರಶ್ನಿಸಿದರೆ, ‘ಸಂಬಳ ನೀಡಲು ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಲಾಗಿದೆ’ ಎಂದು ಸಾರಿಗೆ ಇಲಾಖೆ ಉತ್ತರಿಸುತ್ತಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳ ಸುಮಾರು 1.25 ಲಕ್ಷ ನೌಕರರು ಏಪ್ರಿಲ್ 7ರಿಂದ 21ರವರೆಗೆ ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸಿದ್ದರು. ಸರ್ಕಾರ ನೀಡಿದ ಭರವಸೆ ನಂಬಿ ಪ್ರತಿಭಟನೆ ಕೈಬಿಟ್ಟಿದ್ದ ನೌಕರರು, ಕೋವಿಡ್ ಪರೀಕ್ಷೆ ಮಾಡಿಸಿ ಸೇವೆಗೆ ಹಾಜರಾಗಿದ್ದರು.

ಇದರ ನಡುವೆಯೇ ರಾಜ್ಯದಾದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದು, ಬಸ್‌ಗಳು ಆಯಾ ಡಿಪೊಗಳಲ್ಲೇ ನಿಂತಿವೆ. ಏಪ್ರಿಲ್ ಸಂಬಳಕ್ಕಾಗಿ ಕಾಯುತ್ತಿದ್ದ ನೌಕರರಿಗೆ, ಹಣವಿಲ್ಲವೆಂಬ ಸಾರಿಗೆ ಇಲಾಖೆಯ ಉತ್ತರ ನಿರಾಶೆಯನ್ನುಂಟು ಮಾಡಿದೆ.

ADVERTISEMENT

‘ಮುಷ್ಕರ ಹೊರತುಪಡಿಸಿ ಏಪ್ರಿಲ್ 1ರಿಂದ 6ರವರೆಗೆ ಹಾಗೂ ಏಪ್ರಿಲ್ 22ರಿಂದ 30ರವರೆಗೆ ಬಹುತೇಕ ನೌಕರರು ಕೆಲಸ ಮಾಡಿದ್ದಾರೆ. ಆದರೆ, ನೌಕರರಿಗೆ ಇದುವರೆಗೂ ಇಲಾಖೆ ಸಂಬಳ ನೀಡಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಕಾರ್ಯದರ್ಶಿ ಆನಂದ್ ಹೇಳಿದರು.

ಸಂಬಳದ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ಮೂಲಗಳು, ‘ಆದಾಯದಲ್ಲಿ ಸಾಕಷ್ಟು ನಷ್ಟವಾಗಿದೆ. ಪ್ರತಿ ತಿಂಗಳು ಸಂಬಳ ನೀಡಲು ₹ 325 ಕೋಟಿ ಬೇಕು. ಮುಂದಿನ ಮೂರು ತಿಂಗಳು ಸಂಬಳ ನೀಡುವುದಕ್ಕಾಗಿ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಅನುದಾನ ಬರುತ್ತಿದ್ದಂತೆ ಸಂಬಳ ಬಿಡುಗಡೆ ಮಾಡಲಾಗುವುದು’ ಎಂದಿದೆ.

‘ಮುಷ್ಕರದಲ್ಲಿ ಪಾಲ್ಗೊಂಡಿದ್ದ 18 ಸಾವಿರ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ತರಬೇತಿನಿರತ 3 ಸಾವಿರ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.