ADVERTISEMENT

ದಂಡ ತಪ್ಪಿಸಲು ಫಲಕ ಮುಚ್ಚುವ ವಾಹನ ಸವಾರರು: ಕ್ಯಾಮೆರಾ ಕಣ್ತಿಪ್ಪಿಸಲು ನಾನಾ ತಂತ್ರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 21:55 IST
Last Updated 10 ಏಪ್ರಿಲ್ 2021, 21:55 IST
ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಫಲಕವನ್ನು ಮುಚ್ಚಿರುವುದು
ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದ್ವಿಚಕ್ರ ವಾಹನಗಳ ನೋಂದಣಿ ಸಂಖ್ಯೆ ಫಲಕವನ್ನು ಮುಚ್ಚಿರುವುದು   

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡಲು ಪೊಲೀಸರು ಕ್ಯಾಮೆರಾಗಳನ್ನು ಬಳಸುತ್ತಿದ್ದರೆ, ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಕೆಲ ದ್ವಿಚಕ್ರ ವಾಹನ ಸವಾರರು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರತಿಯೊಂದು ರಸ್ತೆಯಲ್ಲೂ ದಟ್ಟಣೆ ಸಾಮಾನ್ಯವಾಗಿದೆ. ಆದರೆ, ಸಂಚಾರ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ.ಈ ಕಾರಣದಿಂದಾಗಿ, ನಿಯಮ ಉಲ್ಲಂಘನೆಯನ್ನುಕ್ಯಾಮೆರಾಗಳ ಮೂಲಕ ಪತ್ತೆ ಮಾಡಿ, ಸವಾರರಿಗೆ ದಂಡ ವಿಧಿಸಲಾಗುತ್ತಿದೆ.

ಸಿಬ್ಬಂದಿ ಕೈಗೂ ಹೊಸ ತಂತ್ರಜ್ಞಾನದ ಟ್ಯಾಬ್‌ ಹಾಗೂ ಮೊಬೈಲ್‌ಗಳನ್ನು ನೀಡಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳ ಫೋಟೊಗಳನ್ನು ಸೆರೆಹಿಡಿಯುವುದಕ್ಕೆ ಅವಕಾಶವಿದೆ.

ADVERTISEMENT

ಇಂಥ ಕ್ಯಾಮೆರಾದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೆಲ ಸವಾರರು, ವಾಹನಗಳ ನೋಂದಣಿ ಸಂಖ್ಯೆ ಫಲಕಗಳನ್ನು ಮರೆಮಾಚಿಕೊಂಡು ಓಡಾಡುತ್ತಿದ್ದಾರೆ. ಸವಾರರ ಈ ವರ್ತನೆಯ ದೃಶ್ಯಗಳು ಸಹ ಕ್ಯಾಮೆರಾದಲ್ಲಿ ಸೆರೆಯಾಗಿವೆ.

’ಕೆಲವರು ಹೆಲ್ಮೆಟ್‌ ಧರಿಸದಿರುವುದು ಸೇರಿದಂತೆ ಹಲವು ಬಗೆಯಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಕ್ಯಾಮೆರಾ ಕಂಡ ಕೂಡಲೇ ಫಲಕವನ್ನು ಮುಚ್ಚಿಕೊಂಡು ಹೋಗುತ್ತಿದ್ದಾರೆ. ಕೆಲ ಮಹಿಳೆಯರು, ಸೀರೆ ಸೆರಗಿನಿಂದಲೂ ಫಲಕ ಮುಚ್ಚಿಕೊಂಡು ಹೋಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಸವಾರರ ಸಂಚಾರಕ್ಕೆ ಅಡ್ಡಿಪಡಿಸಬಾರದೆಂಬ ಕಾರಣಕ್ಕೆ ಸಿಬ್ಬಂದಿ ರಸ್ತೆಯಲ್ಲಿ ಸವಾರರನ್ನು ಅಡ್ಡಗಟ್ಟುತ್ತಿಲ್ಲ. ನಿಯಮ ಉಲ್ಲಂಘಿಸಿದರೂ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸವಾರರ ಮನೆಗೂ ದಂಡದ ರಶೀದಿ ಸಮೇತ ನೋಟಿಸ್‌ ಕಳುಹಿಸಲಾಗುತ್ತಿದೆ. ಆದರೆ, ಕೆಲ ಸವಾರರು ಮಾತ್ರ ಕ್ಯಾಮೆರಾವನ್ನೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ’ ಎಂದೂ ತಿಳಿಸಿದರು.

‘ಕೈ, ಕಾಲು, ಬಟ್ಟೆ, ಎಲೆಗಳಿಂದಲೂ ದ್ವಿಚಕ್ರ ವಾಹನದ ಹಿಂಭಾಗದ ನೋಂದಣಿ ಸಂಖ್ಯೆ ಫಲಕವನ್ನು ಮುಚ್ಚುತ್ತಿದ್ದಾರೆ. ಕ್ಯಾಮೆರಾದಲ್ಲಿ ವಾಹನದ ನೋಂದಣಿ ಸಂಖ್ಯೆ ಸೆರೆಯಾಗಬಾರದೆಂಬ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.