ADVERTISEMENT

ಬೆಂಗಳೂರು: ಆರೋಗ್ಯ ವೃದ್ಧಿಗೆ ಸಹಕಾರಿಯಾದ ಪೌಷ್ಟಿಕ ಆಹಾರ

ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಊಟ–ತಿಂಡಿಗೆ ರೋಗಿಗಳಿಂದ ಉತ್ತಮ ಸ್ಪಂದನೆ *ಇಸ್ಕಾನ್‌ನಿಂದ ಪೂರೈಕೆ

ವರುಣ ಹೆಗಡೆ
Published 10 ಫೆಬ್ರುವರಿ 2026, 0:30 IST
Last Updated 10 ಫೆಬ್ರುವರಿ 2026, 0:30 IST
ಇಸ್ಕಾನ್‌ನಿಂದ ಬಂದ ಊಟವನ್ನು ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿತರಿಸುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರಗಳು: ಎಂ.ಎಸ್. ಮಂಜುನಾಥ್
ಇಸ್ಕಾನ್‌ನಿಂದ ಬಂದ ಊಟವನ್ನು ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿತರಿಸುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರಗಳು: ಎಂ.ಎಸ್. ಮಂಜುನಾಥ್   

ಬೆಂಗಳೂರು: ಆರೋಗ್ಯ ಇಲಾಖೆಯು ನಗರದ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಚಯಿಸಿರುವ ವಿಶೇಷ ಪೌಷ್ಟಿಕ ಆಹಾರಕ್ಕೆ ರೋಗಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಆಹಾರವು ರೋಗಿಗಳ ಆರೋಗ್ಯ ವೃದ್ಧಿಗೂ ಸಹಕಾರಿಯಾಗಿದೆ. 

ಇಸ್ಕಾನ್‌ ಸಹಯೋಗದಲ್ಲಿ ರೂಪಿಸಿರುವ ಈ ಯೋಜನೆಗೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. 

ಒಂದೇ ರೀತಿಯ ಸಾಮಾನ್ಯ ಆಹಾರದ ಬದಲು, ರೋಗಿಗಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ಆಹಾರವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ನಗರದ ಈ ಮೂರು ಆಸ್ಪತ್ರೆಗಳಲ್ಲಿ ಹೊಸ ಆಹಾರ ‘ಮೆನು’ವಿಗೆ ರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರಿಂದ, ಕಳೆದ ತಿಂಗಳು, ರಾಜ್ಯದ ಐದು ಆಸ್ಪತ್ರೆಗಳಿಗೆ ಯೋಜನೆ ವಿಸ್ತರಿಸಲಾಗಿದೆ. ಆ ಆಸ್ಪತ್ರೆಗಳ ಪಟ್ಟಿಯಲ್ಲಿ ನಗರದ ಯಲಹಂಕ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆ ಕೂಡ ಸೇರಿದೆ. ಬೆಂಗಳೂರಿನಲ್ಲಿರುವ ಐದು ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆಯಾಗುತ್ತಿದೆ.

ADVERTISEMENT

ಈ ಮೊದಲು ಆಸ್ಪತ್ರೆಯ ಕಿಚನ್‌ಗಳಲ್ಲಿಯೇ ಊಟ–ತಿಂಡಿ ತಯಾರಿಸಿ ವಿತರಿಸಲಾಗುತ್ತಿತ್ತು. ಒಂದೇ ರೀತಿಯ ಊಟ–ತಿಂಡಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆಯೂ ರೋಗಿಗಳಿಂದ ದೂರುಗಳು ಬರುತ್ತಿದ್ದವು. ಇದರಿಂದಾಗಿ ಹೆಚ್ಚಿನ ಆಹಾರ ವ್ಯರ್ಥವಾಗುತ್ತಿತ್ತು. 

ಇಸ್ಕಾನ್‌ ತನ್ನ ಕೇಂದ್ರೀಕೃತ ಅಡುಗೆಮನೆಯಲ್ಲಿ ಊಟ–ತಿಂಡಿಗಳನ್ನು ತಯಾರಿಸಿ, ನಿಗದಿತ ಅವಧಿಗೆ ಆಸ್ಪತ್ರೆಗಳಿಗೆ ತಲುಪಿಸುತ್ತಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ತಿಂಡಿ ಹಾಗೂ ರಾತ್ರಿ ಊಟವನ್ನು ಒದಗಿಸಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಊಟ–ತಿಂಡಿಯ ಮೇಲುಸ್ತುವಾರಿ ತಪ್ಪಿದೆ. ಇಸ್ಕಾನ್‌ನಿಂದ ಊಟ–ತಿಂಡಿ ಬಂದ ಬಳಿಕ ಅವುಗಳ ಮಾದರಿಯನ್ನು ಆಸ್ಪತ್ರೆಯ ಮುಖ್ಯಸ್ಥರಿಗೆ ಮೊದಲು ಒದಗಿಸಿ, ಪರಿಶೀಲಿಸಿದ ಬಳಿಕ ರೋಗಿಗಳಿಗೆ ವಿತರಿಸಲಾಗುತ್ತಿದೆ. ಆಹಾರ ಪದಾರ್ಥಗಳ ಪ್ರತಿ ಕಂಟೇನರ್‌ ಮೇಲೂ ಅಗತ್ಯ ವಿವರ ನಮೂದಿಸಲಾಗುತ್ತಿದೆ. ವಾರ್ಡ್‌ಗಳಿಗೆ ಹಾಗೂ ರೋಗಿಗಳು ಇದ್ದಲ್ಲಿಯೇ ತೆರಳಿ ಊಟ–ತಿಂಡಿ ವಿತರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಊಟಗಳಿಗೆ ಮೂಗು ಮುರಿಯುತ್ತಿದ್ದ ರೋಗಿಗಳು, ಈಗ ವಿಶೇಷ ಪೌಷ್ಟಿಕ ಆಹಾರವನ್ನು ಸಂತೋಷದಿಂದ ಸೇವಿಸುತ್ತಿದ್ದಾರೆ. 

ಐದು ಆಹಾರ ಕ್ರಮ: ಸಾಮಾನ್ಯ ಆಹಾರ ಕ್ರಮದ ಜತೆಗೆ, ಚಿಕಿತ್ಸಾ ಆಹಾರ ಕ್ರಮವನ್ನು ಯೋಜನೆಯಡಿ ರೂಪಿಸಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರ ಆಹಾರ ಕ್ರಮ, ಮಕ್ಕಳ ಆಹಾರ ಕ್ರಮ, ಸಾಮಾನ್ಯ ಆಹಾರ ಕ್ರಮ, ಮಧುಮೇಹಿಗಳ ಆಹಾರ ಕ್ರಮ, ಚಿಕಿತ್ಸಾ ಆಹಾರ ಕ್ರಮವೆಂದು ಆಹಾರವನ್ನು ಐದು ಪ್ರಮುಖ ವಿಭಾಗಗಳಾಗಿ ವಿಂಗಡಿಸಿ, ಯೋಜನೆಯಡಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಗರ್ಭಿಣಿಯರಿಗೆ ಗರ್ಭಾವಸ್ಥೆಯ ಆರೋಗ್ಯಕ್ಕೆ ಅಗತ್ಯವಾದ ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲ ಹೆಚ್ಚಿರುವ ಆಹಾರವನ್ನು ಕೊಡಲಾಗುತ್ತಿದೆ. ಬಾಣಂತಿಯರಿಗೆ ಹಾಲು ಉತ್ಪಾದನೆ ಮತ್ತು ಆರೋಗ್ಯಕ್ಕೆ ಸಹಕಾರಿಯಾಗುವ ಆಹಾರವನ್ನು ಒದಗಿಸಲಾಗುತ್ತಿದೆ.  

‘ಪ್ರತಿದಿನ ಬೆಳಿಗ್ಗೆ ಉಪಾಹಾರ, ಸಂಜೆ ಲಘು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಒದಗಿಸುವ ಜತೆಗೆ, ಊಟ–ತಿಂಡಿ ಉತ್ತಮ ಗುಣಮಟ್ಟದಿಂದ ಕೂಡಿದೆ’ ಎನ್ನುತ್ತಾರೆ ರೋಗಿಗಳು.

.
ಶುಚಿ ಹಾಗೂ ರುಚಿಯಾದ ಊಟ–ತಿಂಡಿಯನ್ನು ರೋಗಿಗಳಿಗೆ ವಿತರಿಸುತ್ತಿದ್ದೇವೆ. ಸರಿಯಾದ ಸಮಯಕ್ಕೆ ಆಹಾರವನ್ನು ಪೂರೈಸುತ್ತಿದ್ದು ಈ ಕಾರ್ಯ ನಮಗೂ ತೃಪ್ತಿ ನೀಡಿದೆ
ಶಿವಪ್ಪ ಮೇಲ್ವಿಚಾರಕ ಇಸ್ಕಾನ್
ರೋಗಿಗಳಿಗೆ ಅಧಿಕ ಪೋಷಕಾಂಶಯುಕ್ತ ಆಹಾರ ಅಗತ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಆಹಾರ ‘ಮೆನು’ ತಯಾರಿಸಿ ಊಟ–ತಿಂಡಿ ವಿತರಿಸಲಾಗುತ್ತಿದೆ
ಡಾ.ಶಶಿಕಲಾ ಸ್ಥಾನಿಕ ವೈದ್ಯಾಧಿಕಾರಿ ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆ 

ನಿತ್ಯ ವೈವಿಧ್ಯ ಆಹಾರ

ಆಸ್ಪತ್ರೆಗಳಲ್ಲಿ ದೈನಂದಿನ ಆಹಾರ ‘ಮೆನು’ವನ್ನು ಪ್ರದರ್ಶಿಸಿ ಅದೇ ಪ್ರಕಾರ ನೀಡಲಾಗುತ್ತಿದೆ.

ಉಪ್ಪಿಟ್ಟು ಪೊಂಗಲ್ ಗೋಧಿ ಗಂಜಿ ರಾಗಿಮುದ್ದೆ ಚಪಾತಿ ಅನ್ನ–ಸಾಂಬಾರ್ ಪಲ್ಯ ಸೋಯಾ ಚಂಕ್ಸ್ ಹಾಲು ಹಣ್ಣುಗಳು ಮೊಸರು ಬಿಸ್ಕತ್ ಚಿಕ್ಕಿಯನ್ನು ‘ಮೆನು’ ಒಳಗೊಂಡಿದೆ. ಬೆಳಿಗ್ಗೆ 8 ಗಂಟೆಗೆ ತಿಂಡಿ ಒದಗಿಸಿದರೆ ಮಧ್ಯಾಹ್ನ 11 ಗಂಟೆ ವೇಳೆ ಮಜ್ಜಿಗೆ ಹಾಲು ಹಣ್ಣನ್ನು ನೀಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯ ಬಳಿಕ ಊಟ ಸಂಜೆ 4 ಗಂಟೆಯ ಬಳಿಕ ಹಾಲು ಅಥವಾ ಚಹಾದ ಜತೆಗೆ ಬಿಸ್ಕತ್ತು ಅಥವಾ ಚಿಕ್ಕಿ ರಾತ್ರಿ 7.30ರ ಬಳಿಕ ಊಟವನ್ನು ಒದಗಿಸಲಾಗುತ್ತಿದೆ. ಮಧುಮೇಹಿಗಳು ಗರ್ಭಿಣಿಯರ ತಾಯಂದಿರು ಮಕ್ಕಳು ಹಾಗೂ ಸಾಮಾನ್ಯ ರೋಗಿಗಳಿಗೆ ಬೇರೆ ಬೇರೆ ಪಥ್ಯಾಹಾರ ನಿಗದಿಮಾಡಲಾಗಿದೆ.

ರೋಗಿಗಳಿಗೆ ಒದಗಿಸಲಾಗುತ್ತಿರುವ ಪೌಷ್ಟಿಕ ಆಹಾರದ ವೆಚ್ಚವನ್ನು ಇಸ್ಕಾನ್‌ಗೆ ಆರೋಗ್ಯ ಇಲಾಖೆ ಭರಿಸಲಿದೆ. ಸಾಮಾನ್ಯ ರೋಗಿಗೆ ಉಪಾಹಾರಕ್ಕೆ ₹45 ನಿಗದಿಪಡಿಸಿದರೆ ಮಕ್ಕಳಿಗೆ ₹30 ಗೊತ್ತುಪಡಿಸಲಾಗಿದೆ. ಮಧ್ಯಾಹ್ನದ ಊಟ ಸಾಮಾನ್ಯ ರೋಗಿಗೆ ₹52 ಇದ್ದರೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೀಡುವ ಊಟಕ್ಕೆ ₹60ರಂತೆ ಪಾವತಿಸಲಾಗುತ್ತದೆ. ದಿನವೊಂದಕ್ಕೆ ಸಾಮಾನ್ಯ ರೋಗಿಗೆ ₹183 ವೆಚ್ಚ ಮಾಡಿದರೆ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ₹225 ಪಾವತಿಸಲಾಗುತ್ತಿದೆ. 

‘ಆಸ್ಪತ್ರೆ ದಾಖಲಾತಿ ಹೆಚ್ಚಳ’

‘ಆರೋಗ್ಯ ಇಲಾಖೆ ಪರಿಚಯಿಸಿರುವ ವಿಶೇಷ ಪೌಷ್ಟಿಕ ಆಹಾರ ಯೋಜನೆ ರೋಗಿಗಳ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಪ್ರತಿ ದಿನವೂ ಮೆನುವಿನಲ್ಲಿ ಬದಲಾವಣೆ ಮಾಡಿ ಅಗತ್ಯ ಪೋಷಕಾಂಶಗಳ ಅನುಸಾರ ಊಟ–ತಿಂಡಿ ಪೂರೈಕೆ ಮಾಡುತ್ತಿದ್ದಾರೆ. ರೋಗಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ರೋಗಿಗಳು ಇನ್ನು ಒಂದೆರಡು ದಿನ ಇದ್ದು ಮತ್ತಷ್ಟು ಚೇತರಿಸಿಕೊಂಡು ತೆರಳುವುದಾಗಿ ಹೇಳುತ್ತಿದ್ದಾರೆ. ದಾಖಲಾತಿಯೂ ಹೆಚ್ಚಳವಾಗುತ್ತಿದ್ದು ಊಟ–ತಿಂಡಿಯನ್ನು ಯಾರೂ ತಪ್ಪಿಸಿಕೊಳ್ಳುತ್ತಿಲ್ಲ’ ಎಂದು ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಕೆ.ಎಸ್. ತಿಳಿಸಿದರು.

ರೋಗಿಗಳು ಏನಂತಾರೆ?

ವಿಶೇಷ ಪೌಷ್ಟಿಕ ಆಹಾರ ಯೋಜನೆಯಡಿ ನೀಡಲಾಗುತ್ತಿರುವ ಊಟ–ತಿಂಡಿ ಗುಣಮಟ್ಟದಿಂದ ಕೂಡಿದೆ. ಆಹಾರವನ್ನು ವ್ಯರ್ಥ ಮಾಡದೆ ಸೇವಿಸುತ್ತಿದ್ದೇವೆ. ಹೊರಗಡೆಯಿಂದ ಊಟ–ತಿಂಡಿ ತರಿಸಿಕೊಳ್ಳುವುದು ತಪ್ಪಿದೆ.
ಸೆಲ್ವಿ ಎಚ್‌ಎಎಲ್ ನಿವಾಸಿ
ಇಸ್ಕಾನ್‌ನವರು ಊಟ–ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತಿದ್ದಾರೆ. ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಊಟ–ತಿಂಡಿ ದೊರೆಯುವಂತಾಗಬೇಕು
ಶಿವಾಜಿ ಕಮನಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.