ADVERTISEMENT

ಶಾಲಾ ಶುಲ್ಕ ಪಾವತಿ ವಿಳಂಬ; ದಂಡ ರೂಪದಲ್ಲಿ ಶೇ 3ರಷ್ಟು ಬಡ್ಡಿ ವಸೂಲಿ: ಪೋಷಕರ ಆರೋಪ

ಪೋಷಕರ ಆಕ್ರೋಶ, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 1:05 IST
Last Updated 13 ಫೆಬ್ರುವರಿ 2025, 1:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಶುಲ್ಕದ ಕಂತು ಪಾವತಿಸಲು ತಡ ಮಾಡಿದ್ದಕ್ಕೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಬ್‌ಗಯಾರ್ ಶಾಲೆಯವರು ಕೆಲ ಪೋಷಕರು ಮತ್ತು ಮಕ್ಕಳಿಂದ ಶುಲ್ಕದ ಜೊತೆಗೆ, ಶೇಕಡ 3ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಕ್ರಮವನ್ನು ಖಂಡಿಸಿ ಪೋಷಕರು ಕೆಲವು ಸಂಘಟನೆಗಳ ಕಾರ್ಯಕರ್ತರೊಂದಿಗೆ ಸೇರಿ ಮಂಗಳವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಶಾಲೆಯವರು ಪೋಷಕರನ್ನು ಸಮಾಧಾನಪಡಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಒಪ್ಪದ ಪೋಷಕರು, ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ತಡವಾಗಿ ಶುಲ್ಕ ಪಾವತಿಸಿದರೆ ದಂಡ ವಿಧಿಸಬೇಕೆಂದು ಯಾವ ಕಾನೂನಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೋಷಕರು, ‘ನಾವು ಐದು ಕಂತುಗಳಲ್ಲಿ ಶಾಲಾ ಶುಲ್ಕವನ್ನು ಪಾವತಿಸುತ್ತೇವೆ. ಶಾಲೆ ಆರಂಭಕ್ಕೆ ಮುನ್ನವೇ ಮಾರ್ಚ್‌ ತಿಂಗಳಲ್ಲೇ ಎರಡು ಕಂತು ಶುಲ್ಕ ಕಟ್ಟಿಸಿಕೊಳ್ಳುತ್ತಾರೆ. ಉಳಿದ ಮೂರು ಕಂತುಗಳನ್ನು ಜನವರಿ ತಿಂಗಳೊಳಗೆ ಹಂತ ಹಂತವಾಗಿ ಪಾವತಿಸಬೇಕು. ಇದು ತಡವಾಗಿದ್ದಕ್ಕೆ ಮೊನ್ನೆ ಶುಲ್ಕ ಪಾವತಿಸಲು ಹೋದ ಪೋಷಕರ ಬಳಿ ಶುಲ್ಕದೊಂದಿಗೆ ತಿಂಗಳಿಗೆ ಶೇ 3ರಂತೆ ದಂಡ ಸೇರಿಸಿ ಪಾವತಿಸಲು ಕೇಳಿದ್ದಾರೆ’ ಎಂದು ದೂರಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬರ ಪೋಷಕ ಲೋಕೇಶ್, ‘ವರ್ಷಕ್ಕೆ 1.58 ಲಕ್ಷ ಶುಲ್ಕ ಪಾವತಿಸುತ್ತೇನೆ. ಕಳೆದ ಮಾರ್ಚ್‌ನಲ್ಲಿ ₹50 ಸಾವಿರ ಕಟ್ಟಿದ್ದೆ. ಉಳಿದಿದ್ದನ್ನು ಮೂರು ಕಂತುಗಳಲ್ಲಿ ಕಟ್ಟಬೇಕಿತ್ತು. ನಾನು ಆ ಹಣವನ್ನು ಒಟ್ಟಿಗೆ ಕಟ್ಟಿದೆ. ಶುಲ್ಕ ಪಾವತಿ ತಡವಾಗಿದ್ದಕ್ಕೆ ತಿಂಗಳಿಗೆ ಶೇ 3ರಂತೆ ₹9 ಸಾವಿರವನ್ನು ಶುಲ್ಕದ ಜೊತೆ ಸೇರಿಸಿ ಕಟ್ಟಲು ಕೇಳಿದರು. ಇದನ್ನು ರಸೀದಿಗಳಲ್ಲಿ ಲಿಖಿತವಾಗಿಯೇ ಕೊಟ್ಟಿದ್ದಾರೆ. ಇದು ಅನ್ಯಾಯ. ಹೀಗೆ ದಂಡ ಹಾಕಬೇಕು ಅಂತ ಕಾನೂನು ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಇದು ಅನ್ಯಾಯ. ಈ ವಿಚಾರವನ್ನು ಪರಿಶೀಲಿಸಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.