ಬೆತ್ತನಗೆರೆ– ವಾಜರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ
ಹೆಸರಘಟ್ಟ: ಬೆಂಗಳೂರು ಉತ್ತರ ತಾಲ್ಲೂಕಿನ ಬೆತ್ತನಗೆರೆ ಗ್ರಾಮದಿಂದ ನೆಲಮಂಗಲದ ವಾಜರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು ಸಾರ್ವಜನಿಕರು ಸಂಚರಿಸಲು ಕಷ್ಟಪಡುವಂತಾಗಿದೆ.
ಹೆಸರಘಟ್ಟ, ಗೋಪಾಲಪುರ, ಹುಸ್ಕೂರು ಮಾರ್ಗವಾಗಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ದಿನನಿತ್ಯ ನೆಲಮಂಗಲಕ್ಕೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ತುಂಬಾ ದಪ್ಪ ಜಲ್ಲಿ ಕಲ್ಲುಗಳು ಆವರಿಸಿರುವುದರಿಂದ, ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಹರಸಹಾಸ ಪಡಬೇಕಾಗಿದೆ.
ಈ ರಸ್ತೆಗೆ ಹೊಂದಿಕೊಂಡಂತೆ ಹಲವಾರು ಬಡಾವಣೆಗಳಿವೆ. ಇಲ್ಲಿ ಹೊಸದಾಗಿ ಮನೆಗಳು ನಿರ್ಮಾಣವಾಗುತ್ತಿವೆ. ಮನೆಗಳ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸಲು ಕೂಡ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ‘ಶಾಲಾ ಕಾಲೇಜಿಗಾಗಿ ನೆಲಮಂಗಲಕ್ಕೆ ಸೈಕಲ್‌ನಲ್ಲಿ ತೆರಳುವ ವಿದ್ಯಾರ್ಥಿಗಳು, ಈ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ’ ಎಂದು ಸ್ಥಳೀಯರು ದೂರಿದರು.
ನೆಲಮಂಗಲ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಗಡಿ ಭಾಗದಲ್ಲಿರುವ ರಸ್ತೆಯು (ಬೆತ್ತನಗೆರೆ ಮತ್ತು ವಾಜರಹಳ್ಳಿ ಮಧ್ಯೆ) ಅನೇಕ ವರ್ಷಗಳಿಂದ ಅಭಿವೃದ್ಧಿ ಕಂಡಿಲ್ಲ. ಈಗಂತೂ ರಸ್ತೆಯು ಸಂಪೂರ್ಣ ಹಾಳಾಗಿದೆ. ಸಂಬಂಧಪಟ್ಟವರು ಕೂಡಲೇ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯ ನಿವಾಸಿ ಮಹೇಶ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.