ಬೆಂಗಳೂರು: ‘ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳುವ ಮೂಲಕ ಯುವ ಪೀಳಿಗೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು’ ಎಂದು ಆಸ್ಟ್ರೇಲಿಯಾದ ಮೆಲ್ಬರ್ನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟಿಂಗ್ ಆ್ಯಂಡ್ ಇನ್ಫರ್ಮೇಷನ್ ಸಿಸ್ಟಮ್ಸ್‌ನ ಪ್ರಾಧ್ಯಾಪಕ ಪ್ರೊ. ರಾಜ್‌ಕುಮಾರ್ ಬುಯ್ಯಾ ಹೇಳಿದರು.
ಪಿಇಎಸ್ ವಿಶ್ವವಿದ್ಯಾಲಯದ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಿದರು. ಭಗವದ್ಗೀತೆಯ ಶ್ಲೋಕಗಳನ್ನು ಉಲ್ಲೇಖಿಸಿದ ಅವರು, ‘ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳಲು ಭಗವದ್ಗೀತೆಯಂತಹ ಆಧ್ಯಾತ್ಮಿಕ ಪುಸ್ತಕಗಳು ಸಹಕಾರಿ. ಐನ್‌ಸ್ಟೈನ್, ಸ್ಟೀವ್ ಜಾಬ್ಸ್, ಎಂ.ಕೆ. ಗಾಂಧಿ ಮೊದಲಾದ ಮಹಾನ್ ವ್ಯಕ್ತಿಗಳು ಗೀತೆಯಲ್ಲಿ ಸ್ಫೂರ್ತಿಯನ್ನು ಹುಡುಕುತ್ತಿದ್ದರು’ ಎಂದರು.
ಪಿಎಚ್.ಡಿ ಮತ್ತು ಶ್ರೇಯಾಂಕ ಪಡೆದವರಿಗೆ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹರ್ ದೊರೆಸ್ವಾಮಿ, ‘ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಎಂ.ಆರ್. ದೊರೆಸ್ವಾಮಿ ಅವರು ಪರಿಶ್ರಮ, ಶ್ರೇಷ್ಠತೆ ಮತ್ತು ಸೇವೆಯ ಮೌಲ್ಯಗಳೊಂದಿಗೆ ಬದುಕಿದರು. ವಿದ್ಯಾರ್ಥಿಗಳಿಗೆ ಪರಿಶ್ರಮವು ಆಧಾರಸ್ತಂಭ ಆಗಿದ್ದರೆ, ಶ್ರೇಷ್ಠತೆಯು ದಿಕ್ಸೂಚಿಯಾಗಿರುತ್ತದೆ’ ಎಂದು ಹೇಳಿದರು.
ಒಂಬತ್ತು ಮಂದಿಗೆ ಪಿಎಚ್.ಡಿ, ಒಬ್ಬರಿಗೆ ಎಂ.ಟೆಕ್ ಸಂಶೋಧನಾ ಪ್ರಶಸ್ತಿ, 1,128 ಮಂದಿಗೆ ಸ್ನಾತಕೋತ್ತರ ಪದವಿ ಸೇರಿ ಒಟ್ಟು 4,607 ವಿದ್ಯಾರ್ಥಿಗಳು ಪದವಿ ಪಡೆದರು.
ವಿಶ್ವವಿದ್ಯಾಲಯದ ಕುಲಪತಿ ಜೆ. ಸೂರ್ಯಪ್ರಸಾದ್, ಕುಲಸಚಿವ ಕೆ.ಎಸ್. ಶ್ರೀಧರ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರೊ. ಅಜಯ್ ಕುಮಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಕಾರ್ತಿಕ್ ಎಸ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.