ADVERTISEMENT

ಶಿಕ್ಷಣ ತಜ್ಞ ಎಂ.ಆರ್‌.ದೊರೆಸ್ವಾಮಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:53 IST
Last Updated 6 ಮಾರ್ಚ್ 2025, 15:53 IST
ಎಂ.ಆರ್. ದೊರೆಸ್ವಾಮಿ
ಎಂ.ಆರ್. ದೊರೆಸ್ವಾಮಿ   

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದ ಸಂಸ್ಥಾಪನಾಧ್ಯಕ್ಷ ಹಾಗೂ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ (89) ಅವರು ಗುರುವಾರ ನಿಧನರಾದರು.  

ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮೃತರಿಗೆ ಪತ್ನಿ ರಾಧಾ ಮನೋಹರಿ, ಪಿಇಎಸ್‌ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಯೂ ಆಗಿರುವ ಪುತ್ರ ಪ್ರೊ.ಡಿ. ಜವಾಹರ್, ಸೊಸೆ ಸುಮನ್ ಜವಾಹರ್, ಪುತ್ರಿ ಡಿ. ರೂಪಾ, ಅಳಿಯ ಸುರೇಶ್ ಕೃಷ್ಣ ಇದ್ದಾರೆ. ಬನಶಂಕರಿ ಎರಡನೇ ಹಂತದಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ.

ಅವರ ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನ 3.30ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.30ಕ್ಕೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. 

ADVERTISEMENT

ಶಿಕ್ಷಣ ತಜ್ಞರಾದ ದೊರೆಸ್ವಾಮಿ ಅವರು, 1937ರ ನವೆಂಬರ್‌ 7ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನರ‍್ರವೂರಿನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ್ದರು. ಬಳಿಕ ಕುಟುಂಬಸ್ಥರೊಂದಿಗೆ ಬೆಂಗಳೂರಿಗೆ ಬಂದ ಅವರು, ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ದಯಾನಂದ ಸಂಜೆ ಕಾಲೇಜು, ಹನುಮಂತನಗರದ ಪಿಇಎಸ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಅವರು, 2013ರಿಂದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಹೊಂದಿದ್ದ ಅವರು, 1972ರಲ್ಲಿ ಪಿಇಎಸ್ ಪದವಿಪೂರ್ವ ಕಾಲೇಜು ಪ್ರಾರಂಭಿಸಿದ್ದರು. ಬಳಿಕ ಪದವಿ ಕಾಲೇಜು, ವಿಶ್ವವಿದ್ಯಾಲಯ ಪ್ರಾರಂಭಿಸಿದರು. 40 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ ಸಂಸ್ಥೆಯು, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶಾಖೆಗಳನ್ನು ಹೊಂದಿದೆ. ಸುಮಾರು 18 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ದೊರೆಸ್ವಾಮಿ ಅವರು ಬಿಜೆಪಿಯಿಂದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.