ADVERTISEMENT

ಪೂರ್ವ ಬೆಂಗಳೂರಿನಲ್ಲೇ ದಂಡ ಹೆಚ್ಚು

ನಿಷೇಧಿತ ಪ್ಲಾಸ್ಟಿಕ್‌: ಸಾರ್ವಜನಿಕ ಸ್ಥಳದಲ್ಲಿ ಕಸ – ಕಾವೇರಿಪುರದಲ್ಲಿ ಜಾಸ್ತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:08 IST
Last Updated 13 ಅಕ್ಟೋಬರ್ 2019, 20:08 IST
ಸಸಸ
ಸಸಸ   

ಬೆಂಗಳೂರು: ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಸಂಬಂಧ ಪೂರ್ವ ಬೆಂಗಳೂರಿನ ಪ್ರದೇಶಗಳಲ್ಲಿ ಹೆಚ್ಚು ದಂಡ ವಿಧಿಸಲಾಗಿದೆ. ಕಾವೇರಿಪುರ ವಾರ್ಡ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಬಿಸಾಡುವ ಪ್ರಮಾಣ ಹೆಚ್ಚು ಇದೆ. ದಕ್ಷಿಣ ಹಾಗೂ ಪಶ್ಚಿಮ ವಲಯದ ಕೆಲವು ವಾರ್ಡ್‌ಗಳಲ್ಲಿ ಬಯಲು ಶೌಚ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ.

ಬಿಬಿಂಎಂಪಿಯ ಮಾರ್ಷಲ್‌ಗಳು ನಡೆಸಿದ ಸರ್ವೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 232 ಮಾರ್ಷಲ್‌ಗಳು ನಿಯಮ ಉಲ್ಲಂಘನೆ ಸಂಬಂಧ ಸೆಪ್ಟೆಂಬರ್‌ನಲ್ಲಿ 198 ವಾರ್ಡ್‌ಗಳಲ್ಲಿ ಒಟ್ಟು 2,836 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಒಟ್ಟು 14.33 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾವೇರಿಪುರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡಿದ ಹಾಗೂ ಮನೆಯಲ್ಲಿ ಕಸವನ್ನು ವಿಂಗಡಿಸಿ ನೀಡದ ಕುರಿತು ಒಟ್ಟು 40 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ADVERTISEMENT

ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವಾರ್ಡ್‌ನಲ್ಲಿ ನಿಷೇಧಿತ ಪ್ಲಾಸ್ಟಿಕ್‌ ( ಚಮಚ, ತಟ್ಟೆ, ಕೈಚೀಲ ಇತ್ಯಾದಿ) ಬಳಕೆ ಕುರಿತಂತೆ ಒಟ್ಟು 45 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಸಾರ್ವಜನಿಕರಿಂದ ಹಾಗೂ ಅಂಗಡಿ ಮಾಲೀಕರಿಂದ ಒಟ್ಟು ₹ 26,300 ದಂಡ ವಸೂಲಿ ಮಾಡಲಾಗಿದೆ.

ಬಯಲು ಬಹಿರ್ದೆಸೆ ಸಮಸ್ಯೆ ನಿವಾರಣೆಗೆ ಸ್ವಚ್ಛಭಾರತ ಅಭಿಯಾನದಡಿ ಬಿಬಿಎಂಪಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಈ ಸಮಸ್ಯೆಯನ್ನು ಸಂಪೂರ್ಣ ನಿಯಂತ್ರಿಸಲು ಇನ್ನೂ ಸಾಧ್ಯವಾಗಿಲ್ಲ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಳೇಕಹಳ್ಳಿ ವಾರ್ಡ್‌ನಲ್ಲಿ ಬಯಲು ಬಹಿರ್ದೆಸೆಯ 28 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪಾಲಿಕೆ ತಪ್ಪಿತಸ್ಥರಿಂದ ₹ 7,350 ದಂಡ ಸಂಗ್ರಹಿಸಿದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಸುತ್ತೇವೆ’ ಎಂದು ಕರ್ನಾಟಕ ನಿವೃತ್ತ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ಕರ್ನಲ್‌ ರಾಜಬೀರ್‌ ಸಿಂಗ್‌ ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಪಾಲಿಕೆ ಸೆ.1ರಿಂದ ಎಲ್ಲ ವಾರ್ಡ್‌ಗಳಲ್ಲಿ ಮಾರ್ಷಲ್‌ಗಳನ್ನು ನೇಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.