ADVERTISEMENT

Bengaluru Crime: ಕಳ್ಳನ ಕಾರಿನಲ್ಲಿದ್ದ ₹11 ಲಕ್ಷ ಕದ್ದ ಕಾನ್‌ಸ್ಟೆಬಲ್‌

ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲೇ ಕಳ್ಳತನ: ಕದ್ದ ಹಣದಲ್ಲಿ ಪತ್ನಿಗೆ ಆಭರಣ ಖರೀದಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 15:38 IST
Last Updated 4 ಡಿಸೆಂಬರ್ 2025, 15:38 IST
ಜಬೀವುಲ್ಲಾ 
ಜಬೀವುಲ್ಲಾ    

ಬೆಂಗಳೂರು: ನಗರ ಪೊಲೀಸ್‌ ಕಮಿಷನರ್ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿದ್ದ ಕಾರಿನಲ್ಲಿದ್ದ ₹11 ಲಕ್ಷ ಹಣ ಕದ್ದು ನಾಟಕವಾಡಿದ್ದ ಸೈಬರ್ ಅಪರಾಧ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಜಬೀವುಲ್ಲಾ ಕೊನೆಗೂ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಸೈಬರ್ ಅಪರಾಧ ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದ ಆರೋಪಿಯನ್ನು ಕಮಿಷನರ್‌ ಕಚೇರಿ ಆವರಣದಲ್ಲಿರುವ ಸಿಸಿಬಿ ಸೈಬರ್‌ ಕ್ರೈಂ ಠಾಣೆಗೆ ವಿಚಾರಣೆಗೆಂದು ತನಿಖಾಧಿಕಾರಿಗಳು ಕರೆತಂದಿದ್ದರು. ಜಪ್ತಿ ಮಾಡಿಕೊಂಡಿದ್ದ ಆರೋಪಿಯ ಕಾರನ್ನು ಸಹ ತಂದಿದ್ದರು. ಆ ಕಾರಿನಲ್ಲಿದ್ದ ಹಣವನ್ನು ಜಬೀವುಲ್ಲಾ ಕಳ್ಳತನ ಮಾಡಿದ್ದರು ಎಂದು ಮೂಲಗಳು ಹೇಳಿವೆ.  

ವಿಚಾರಣೆಗೆ ತೆರಳುವ ಮುನ್ನ ಆರೋಪಿ ತನ್ನ ಕಾರಿನಲ್ಲಿ ₹11 ಲಕ್ಷ ನಗದು ಇದ್ದ ಬ್ಯಾಗ್ ಇಟ್ಟಿದ್ದರು. ವಿಚಾರಣೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಯನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕೆಲವು ದಿನಗಳ ಬಳಿಕ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಆಗ ಆರೋಪಿ ತನ್ನ ಕಾರು ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿದ್ದ ಹಣ ನಾಪತ್ತೆ ಆಗಿರುವುದು ಗೊತ್ತಾಗಿತ್ತು.

ADVERTISEMENT

ತಕ್ಷಣವೇ ಆರೋಪಿಯು ಸೈಬರ್ ಠಾಣೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ ಹೆಡ್‌ ಕಾನ್‌ಸ್ಟೆಬಲ್‌ ಜಬೀವುಲ್ಲಾ, ಬ್ಯಾಗ್‌ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಕೃತ್ಯ ಎಸಗಿದ ಬಳಿಕ ಹೆಡ್‌ ಕಾನ್‌ಸ್ಟೆಬಲ್‌ ಕೆಲವು ದಿನ ತಮಗೆ ಏನೂ ಗೊತ್ತೇ ಇಲ್ಲ ಎಂಬಂತೆ, ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಪೊಲೀಸರು ಹೇಳಿದರು. 

‘ಘಟನೆಯ ಕುರಿತು ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರಿಗೆ ದೂರು ಸಲ್ಲಿಸಿದ ನಂತರ ತನಿಖೆ ಆರಂಭವಾಗಿತ್ತು. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಜಬೀವುಲ್ಲಾ ಅವರ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆಗ ತನಿಖಾಧಿಕಾರಿಗಳ ಜತೆಗೆ ಹೆಡ್‌ ಕಾನ್‌ಸ್ಟೆಬಲ್‌ ಗಲಾಟೆ ಮಾಡಿದ್ದರು. ನಾನು ಕಳ್ಳತನ ಮಾಡಿಲ್ಲ ಎಂದು ವಾದಿಸಿದ್ದರು. ತನಿಖೆ ಚುರುಕುಗೊಳಿಸಿದಾಗ ಹೆಡ್‌ ಕಾನ್‌ಸ್ಟೆಬಲ್‌ ಕೃತ್ಯ ಬಯಲಾಯಿತು’ ಎಂದು ಮೂಲಗಳು ಹೇಳಿವೆ. 

ಕದ್ದ ಹಣದಲ್ಲಿ ಜಬೀವುಲ್ಲಾ ಅವರು ಪತ್ನಿಗೆ ಚಿನ್ನದ ಆಭರಣ ಖರೀದಿಸಿ ಉಡುಗೊರೆ ಕೊಟ್ಟಿದ್ದರು. ಉಳಿದ ಹಣವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದರು. ₹2 ಲಕ್ಷ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಗೋವಿಂದಪುರ ಠಾಣೆ ಪೊಲೀಸ್​ ಕಾನ್‌ಸ್ಟೆಬಲ್‌ ಅಣ್ಣಪ್ಪ ನಾಯ್ಕ್​ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.