
ಬೆಂಗಳೂರು: ಗುಂಡಿಬಿದ್ದ ರಸ್ತೆಗಳು, ಬೀದಿ ದೀಪಗಳ ಅವ್ಯವಸ್ಥೆ, ಅವೈಜ್ಞಾನಿಕ ರಸ್ತೆ ವಿಭಜಕ ನಿರ್ಮಾಣ, ವಿಳಂಬ ಕಾಮಗಾರಿ, ವಾಹನ ಚಾಲಕರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಗರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಕಳೆದ 10 ತಿಂಗಳಲ್ಲಿ ಸಂಭವಿಸಿದ ಅಪಘಾತಗಳಿಂದ 715 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಅವಧಿಯಲ್ಲಿ 3,985 ಅಪಘಾತಗಳು ಸಂಭವಿಸಿದ್ದು, 3,480 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ, 691 ಮಂದಿ ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಾರೆ ಎಂದು ನಗರದ ಸಂಚಾರ ಪೊಲೀಸರು ಹೇಳಿದರು.
2020ರಲ್ಲಿ 3 ಸಾವಿರ ಅಪಘಾತಗಳು ಸಂಭವಿಸಿದ್ದವು. 2024ರಲ್ಲಿ ಅಪಘಾತಗಳ ಸಂಖ್ಯೆ 5 ಸಾವಿರದ ಸಮೀಪಕ್ಕೆ ತಲುಪಿತ್ತು. ನಗರದಲ್ಲಿ ಪ್ರತಿನಿತ್ಯ ಅಂದಾಜು 3 ಸಾವಿರ ಹೊಸ ವಾಹನಗಳು ನೋಂದಣಿ ಆಗುತ್ತಿವೆ. ವಾಹನ ಸಂಖ್ಯೆ ಹೆಚ್ಚಾದಂತೆ ದಟ್ಟಣೆಯೂ ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ.
ದ್ವಿಚಕ್ರ ವಾಹನ, ಕೆಎಸ್‌ಆರ್‌ಟಿಸಿ–ಬಿಎಂಟಿಸಿ ಬಸ್, ಲಾರಿ, ಟಿಪ್ಪರ್, ಕಾರು, ಜೀಪು, ಕಸ ಸಂಗ್ರಹಿಸುವ ಲಾರಿ ನಡುವೆ ಅಪಘಾತಗಳು ಸಂಭವಿಸುತ್ತಿವೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆಯಿಂದ ಸಾವುಗಳು ಸಂಭವಿಸುತ್ತಿವೆ. ಸ್ಕೈವಾಕ್ ಇಲ್ಲದ ಸ್ಥಳಗಳಲ್ಲಿ ರಸ್ತೆದಾಟುವ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆದು ಸಾವಿಗೆ ಕಾರಣವಾಗುತ್ತಿವೆ.
ನೈಸ್ ರಸ್ತೆಯಲ್ಲೂ ಅತಿವೇಗ: ನೈಸ್ ರಸ್ತೆಯಲ್ಲಿ ವೇಗದ ಮಿತಿ ನಿಯಮ ಜಾರಿ ಮಾಡಲಾಗಿದೆ. ಆದರೆ, ಆ ನಿಯಮ ಜಾರಿ ಆಗುತ್ತಿಲ್ಲ. ವಾಹನಗಳು ವೇಗವಾಗಿ ಸಾಗುತ್ತಿವೆ. ನೈಸ್ ರಸ್ತೆಯ ಕೆಲವು ಸ್ಥಳಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ಅಪಘಾತ ವಲಯಗಳೂ ಸೇರಿ ಹಲವು ಕಡೆ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ನೈಸ್ ರಸ್ತೆ ಉತ್ತಮವಾಗಿದ್ದರೂ ವಾಹನಗಳ ಅತಿವೇಗವು ಸಾವು–ನೋವಿಗೆ ಕಾರಣವಾಗುತ್ತಿದೆ.
ಬಳ್ಳಾರಿ ರಸ್ತೆ, ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸಿವೆ. ಈ ಮಾರ್ಗದಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಕ್ಯಾಮೆರಾ ಅಳವಡಿಕೆ, ಅಲ್ಲಲ್ಲಿ ವೈಜ್ಞಾನಿಕವಾಗಿ ಹಂಪ್ಸ್ ನಿರ್ಮಾಣ, ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ತಕ್ಷಣವೇ ಮುಚ್ಚುವಂತೆ ಸಂಬಂಧಪಟ್ಟ ಆಡಳಿತಕ್ಕೆ ತಿಳಿಸಲಾಗುತ್ತಿದೆ ಎಂದು ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ವಿಳಂಬ ಕಾಮಗಾರಿ: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ‘ನಮ್ಮ ಮೆಟ್ರೊ’ ಕಾಮಗಾರಿ ನಿಧಾನವಾಗಿ ಸಾಗುತ್ತಿದ್ದು, ವಾಹನ ದಟ್ಟಣೆ ಸಮಸ್ಯೆ ಕಾಡುತ್ತಿದೆ. ಕಾಮಗಾರಿಗಾಗಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಬ್ಯಾರಿಕೇಡ್‌ಗಳಿಗೆ ವಾಹನಗಳು ಡಿಕ್ಕಿಯಾಗಿ ಅವಘಡಗಳು ಸಂಭವಿಸುತ್ತಿವೆ. ಕ್ಯಾಬ್‌ಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದವರು ಪ್ರತಿನಿತ್ಯ ಪರದಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬಿಎಂಟಿಸಿ ಬಸ್ ಅಪಘಾತದಿಂದ ಸಂಭವಿಸಿದ ಸಾವು– ನೋವು
* ಫೆ.28: ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಬಿಎಂಟಿಸಿ ಬಸ್‌ಗಳ ಮಧ್ಯೆ ಆಟೊ ಸಿಲುಕಿ ಆಟೊ ಚಾಲಕ ಹಾಗೂ ನಿವೃತ್ತ ವೈದ್ಯ ಸ್ಥಳದಲ್ಲೇ ಸಾವು * ಆಗಸ್ಟ್ 19: ಸಂಜಯನಗರ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಟೆಕಿ ಸ್ಥಳದಲ್ಲೇ ಸಾವು * ಆಗಸ್ಟ್ 21: ಯಲಹಂಕದ ಕೋಗಿಲು ಕ್ರಾಸ್‌ನ ಮಾರುತಿನಗರದ ಸಮೀಪ ಬಿಎಂಟಿಸಿ ಬಸ್‌ನ ಚಕ್ರ ಹರಿದು ಐದನೇ ತರಗತಿ ವಿದ್ಯಾರ್ಥಿನಿ ಸಾವು * ಅ.11: ಟ್ಯೂಷನ್ ಮುಗಿಸಿಕೊಂಡು ತನ್ನ ಸಹೋದರಿ ಮತ್ತು ಸ್ನೇಹಿತೆಯರ ಜತೆಗೆ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು. ರಾಜಾಜಿನಗರದ ಒಂದನೇ ಹಂತದಲ್ಲಿ ಘಟನೆ * ನ.20: ಮಡಿವಾಳ ವಿಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ವೃದ್ಧರಿಬ್ಬರ ಸಾವು
ಆಗಸ್ಟ್‌ನಲ್ಲಿ ಏಳು ಮಂದಿ ಸಾವು
ಬಿಎಂಟಿಸಿ ಬಸ್ ಅಪಘಾತಗಳಲ್ಲಿ 2024ರ ಜನವರಿ 1ರಿಂದ 2025ರ ಜುಲೈ ಅಂತ್ಯದ ವರೆಗೆ 80 ಮಂದಿ ಮೃತಪಟ್ಟಿದ್ದರು. ಕಳೆದ ಆಗಸ್ಟ್‌ನಲ್ಲಿ (ಒಂದೇ ತಿಂಗಳಲ್ಲಿ) ಬಿಎಂಟಿಸಿ ಬಸ್ ಡಿಕ್ಕಿಯಾಗಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ಪೀಣ್ಯ ಮೊದಲ ಹಂತ ರೇಷ್ಮೆ ಸಂಸ್ಥೆ ಬಳಿ ಪೀಣ್ಯ ಎರಡನೇ ಹಂತ ಚಾಮರಾಜಪೇಟೆ ಮಡಿವಾಳ ರೂಪೇನಾ ಅಗ್ರಹಾರ ಸಂಜಯ್ ನಗರ ಮಾರುತಿನಗರದಲ್ಲಿ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದ ಮಹಿಳೆ ಟೆಕಿ ವೃದ್ಧರು ಹಾಗೂ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು. ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಚಾರ ಪೊಲೀಸರು ಹೇಳಿದರು.
ಮೊಬೈಲ್ ಬಳಸಿದರೆ ವಜಾ
ಬಿಎಂಟಿಸಿ ಬಸ್ ಚಾಲಕರು ಕರ್ತವ್ಯದಲ್ಲಿ ಇರುವಾಗ ಮೊಬೈಲ್ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ಆದರೂ ಮೊಬೈಲ್‌ನಲ್ಲಿ ಮಾತನಾಡುತ್ತಾ ಇಯರ್ ಫೋನ್‌ನಲ್ಲಿ ಹಾಡು ಕೇಳುತ್ತಾ ಬಸ್ ಚಲಾಯಿಸುತ್ತಿರುವುದು ಕಂಡುಬಂದಿದೆ. ಆ ರೀತಿಯ ವರ್ತನೆ ಕಂಡುಬಂದರೆ ಅಮಾನತು ಅಥವಾ ಕೆಲಸದಿಂದ ವಜಾ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡುತ್ತಿದ್ದರೆ ನಿರ್ವಾಹಕರು ಮತ್ತು ಪ್ರಯಾಣಿಕರು ಚಾಲಕರಿಗೆ ಬುದ್ಧಿಮಾತು ಹೇಳಬೇಕು. ಬಿಎಂಟಿಸಿ ಬಸ್ ಚಾಲಕರ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಈ ವರ್ಷ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಯಾವ ಸ್ಥಳದಲ್ಲಿ ಬಸ್ ನಿಲುಗಡೆ ಮಾಡಬೇಕು ದಟ್ಟಣೆ ರಸ್ತೆಯಲ್ಲಿ ವೇಗ ಎಷ್ಟಿರಬೇಕು ಎಂಬುದರ ಕುರಿತು ಚಾಲಕರಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.