ADVERTISEMENT

ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ: ಕೊನೇ ಸುತ್ತಿನಲ್ಲಿ ಕಮಾಲ್ ಮಾಡಿದ ನಿಯತಿ, ರಿದಂ

ನಾಲ್ಕು ಸುತ್ತುಗಳಲ್ಲಿ ಹಿಂದೆ ಉಳಿದಿದ್ದ ಆರ್ಮಿ ಪಬ್ಲಿಕ್‌ ಸ್ಕೂಲ್‌ ತಂಡ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 21:08 IST
Last Updated 16 ಡಿಸೆಂಬರ್ 2024, 21:08 IST
<div class="paragraphs"><p>ಬೆಂಗಳೂರಿನಲ್ಲಿ ನಡೆದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ನ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು </p></div>

ಬೆಂಗಳೂರಿನಲ್ಲಿ ನಡೆದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ನ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

   

ಪ್ರಜಾವಾಣಿ ಚಿತ್ರ/ ರಂಜು ಪಿ.

ಬೆಂಗಳೂರು: ಮೊದಲ ನಾಲ್ಕು ಸುತ್ತುಗಳಲ್ಲಿ ಸಾಧಾರಣ ಅಂಕ ಗಳಿಸಿದ್ದ ನಗರದ ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್‌ ಸ್ಕೂಲ್‌ನ ನಿಯತಿ ಜೊಇಸ್, ರಿದಂ ಶ್ರೀವಾಸ್ತವ್ ಕೊನೇ ಸುತ್ತಿನಲ್ಲಿ ಅತ್ಯುತ್ತಮವಾಗಿ ಉತ್ತರಿಸುವ ಮೂಲಕ  ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಬೆಂಗಳೂರು ವಲಯ ಮಟ್ಟದ ಚಾಂಪಿಯನ್‌ ಆಗಿ ಹೊರಹೊಮ್ಮಿದರು. 

ADVERTISEMENT

ಪೈಲೆಟ್‌ ಪೆನ್ಸ್‌ ಸಹಯೋಗದಲ್ಲಿ ಸೋಮವಾರ ಜಯನಗರದ ವಿವೇಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಸ್ಪರ್ಧೆ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಜಿಲ್ಲೆಗಳ 120 ವಿದ್ಯಾಸಂಸ್ಥೆಗಳ ತಂಡಗಳು ವಲಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ಶಿಶುಗೃಹ ಸೀನಿಯರ್‌ ಸ್ಕೂಲ್‌, ಸ್ಟ್ಯಾಂಡರ್ಡ್‌ ಪಬ್ಲಿಕ್‌ ಸ್ಕೂಲ್‌, ಕಾರ್ಮೆಲ್‌ ಪ್ರೌಢಶಾಲೆ, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಎಸ್‌ಜೆಆರ್‌ ಕೆಂಗೇರಿ ಪಬ್ಲಿಕ್‌ ಸ್ಕೂಲ್‌ ಮತ್ತು ಆರ್ಮಿ ಪಬ್ಲಿಕ್‌ ಸ್ಕೂಲ್‌ಗಳು ಮೊದಲ ಆರು ಸ್ಥಾನ ಪಡೆದು ವಲಯ ಮಟ್ಟದ ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದವು.

‘ಪೈಲೆಟ್‌ ನಂ.1 ಚಾಯ್ಸ್‌’ ಮೊದಲ ಸುತ್ತಿನಲ್ಲಿ ದ್ವಿತೀಯ, ‘ವಸುದೈವ ಕುಟುಂಬಕಂ’ ಎರಡನೇ ಸುತ್ತು ಮತ್ತು ‘ದೃಶ್ಯ’ ಮೂರನೇ ಸುತ್ತಿನಲ್ಲಿ ತೃತೀಯ ಸ್ಥಾನ ಪಡೆದಿದ್ದ ಆರ್ಮಿ ಪಬ್ಲಿಕ್‌ ಸ್ಕೂಲ್‌ನ ನಿಯತಿ ಮತ್ತು ರಿದಂ ಅವರು ‘ನಿಮ್ಮ ಪ್ರಶ್ನೆ ನಮ್ಮ ಉತ್ತರ’ ನಾಲ್ಕನೇ ಸುತ್ತಿನಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದರು. ‘ಫಟಾಫಟ್‌’ ಅಂತಿಮ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ಹಿಂದಿಕ್ಕಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. 

ಎರಡನೇ ಸ್ಥಾನಕ್ಕೆ ಟೈಬ್ರೇಕರ್‌: ಮೊದಲ ಸುತ್ತಿನಿಂದ ನಾಲ್ಕನೇ ಸುತ್ತಿನವರೆಗೆ ಶಿಶುಗೃಹ ಸೀನಿಯರ್‌ ಸ್ಕೂಲ್‌ನ ಹಂಸಿನಿ ಮತ್ತು ತ್ರಿವಿಕ್ರಮ್‌ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರು. ಆದರೆ ಅಂತಿಮ ಸುತ್ತು ಅವರ ಕೈ ಹಿಡಿಯಲಿಲ್ಲ.

ಒಂದು ಹಂತದಲ್ಲಿ ‘ಸ್ಟೆಪ್‌ ಅಪ್‌’ ಪಡೆದು ಸರಿ ಉತ್ತರ ನೀಡಿ 15 ಅಂಕ ಗಳಿಸುವ ಅವಕಾಶ ಹಂಸಿನಿ ಮತ್ತು ತ್ರಿವಿಕ್ರಮ್‌ಗೆ ಇತ್ತು. ಆದರೆ, ಡಿಫಾಲ್ಟ್‌ ಪಡೆದು ಸರಿ ಉತ್ತರ ನೀಡಿದ್ದರಿಂದ 10 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿ ಉಳಿದರು. ಎಸ್‌ಜೆಆರ್‌ ಕೆಂಗೇರಿಯ ವರುಣ್‌ ಮತ್ತು ಸಮೀರ್‌ ಸ್ಟೆಪ್‌–ಅಪ್‌ ಪಡೆದು ಉತ್ತರ ನೀಡುವ ಮೂಲಕ ನಾಲ್ಕನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದರು. ಎರಡೂ ತಂಡಗಳು ಸಮವಾಗಿ ಅಂಕ ಗಳಿಸಿದ್ದರಿಂದ ಎರಡನೇ ಸ್ಥಾನಕ್ಕೆ ಟೈಬ್ರೇಕರ್‌ ಪ್ರಶ್ನೆ ನೀಡಬೇಕಾಯಿತು. ಎಸ್‌ಜೆಆರ್‌ ಕೆಂಗೇರಿಯ ವಿದ್ಯಾರ್ಥಿಗಳು ಇಲ್ಲಿಯೂ ಜಾಣ್ಮೆ ತೋರುವ ಮೂಲಕ ಎರಡನೇ ಸ್ಥಾನ ಪಡೆದರು. ಅಷ್ಟೇ ಅಂಕ ಗಳಿಸಿದ್ದ ಶಿಶುಗೃಹ ವಿದ್ಯಾರ್ಥಿಗಳು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಸ್ಪರ್ಧಿಗಳು ಉತ್ತರಿಸಲಾಗದೇ ಪ್ರೇಕ್ಷಕರ ಕಡೆಗೆ ಬಂದ ಪ್ರಶ್ನೆಗಳಿಗೆ ಮತ್ತು ಪ್ರೇಕ್ಷಕರಿಗಾಗಿಯೇ ಸೀಮಿತವಾದ ಪ್ರಶ್ನೆಗಳಿಗೆ ಉತ್ತರಿಸಿ ಹಲವರು ಸ್ಥಳದಲ್ಲೇ ಬಹುಮಾನ ಪಡೆದರು. ‘ಕ್ಯೂರಿಯಾಸಿಟಿ ಸೊಲ್ಯುಷನ್ಸ್‌’ ಸಂಸ್ಥೆಯ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಆಕರ್ಷಕವಾಗಿ ಕ್ವಿಜ್‌ ನಡೆಸಿಕೊಟ್ಟರು.

ಪ್ರಜಾವಾಣಿ’ ರಸಪ್ರಶ್ನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಲೋಕಾಯುಕ್ತ ನ್ಯಾ. ಬಿ.ಎಸ್‌. ಪಾಟೀಲ್‌ ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ‘ಪೈಲೆಟ್ ಪೆನ್‌’ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಕುಮಾರ್‌ ಆರ್‌. ಉದ್ಘಾಟಿಸಿದರು.

ಸಕಾರಾತ್ಮಕ ಚಿಂತನೆ ಅಗತ್ಯ: ನ್ಯಾ. ಬಿ.ಎಸ್‌. ಪಾಟೀಲ್‌

ಎಷ್ಟೇ ಪ್ರತಿಭಾವಂತರಾಗಿದ್ದರೂ ಚಿಂತನೆ ನಕಾರಾತ್ಮಕವಾಗಿದ್ದರೆ ಅವರು ಸ್ವಾರ್ಥಿಗಳಾಗುತ್ತಾರೆ. ಹಿಂಸಾಪ್ರಿಯರಾಗುತ್ತಾರೆ. ಅಂಥವರು ಯಾವುದೇ ಹುದ್ದೆಯಲ್ಲಿದ್ದರೂ ಭ್ರಷ್ಟರಾಗುತ್ತಾರೆ. ಸಕಾರಾತ್ಮಕ ಚಿಂತನೆ ಇದ್ದರೆ ಪಾರದರ್ಶಕರಾಗಿದ್ದುಕೊಂಡು ಸಮಾಜಕ್ಕೆ ಹಿತ ಬಯಸುತ್ತಾರೆ. ದೇಶಕ್ಕೆ ಆಸ್ತಿಯಾಗುತ್ತಾರೆ ಎಂದು ಲೋಕಾಯುಕ್ತ ನ್ಯಾ. ಬಿ.ಎಸ್‌.ಪಾಟೀಲ್‌ ತಿಳಿಸಿದರು.

‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೀವು ಸಕಾರಾತ್ಮಕ ಮತ್ತು ಅತ್ಯುತ್ತಮ ಚಿಂತನೆಯ ಮೂಲಕ ದೇಶದ ಭವಿಷ್ಯವನ್ನು ರೂಪಿಸುವವರಾಗಿ ಎಂದು ವಿದ್ಯಾರ್ಥಿಗಳನ್ನು ಹಾರೈಸಿದರು. ಮಕ್ಕಳಲ್ಲಿ ಅಡಗಿರುವ ಶಕ್ತಿ ಬುದ್ಧಿವಂತಿಕೆ ಹೊರಬರಬೇಕಿದ್ದರೆ ಹೆತ್ತವರು ವಿದ್ಯಾಸಂಸ್ಥೆಗಳು ಸಂಘಟನೆಗಳು ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತವೆ.

‘ಪ್ರಜಾವಾಣಿ’ಯು ರಸಪ್ರಶ್ನೆ ಸ್ಪರ್ಧೆ ಮೂಲಕ ಮಕ್ಕಳ ಜ್ಞಾನಮಟ್ಟವನ್ನು ಹೆಚ್ಚಿಸುತ್ತಿದೆ ಎಂದು ಶ್ಲಾಘಿಸಿದರು. ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮಾತನಾಡಿ ‘ಪ್ರಜಾವಾಣಿಯು ರಾಜ್ಯಮಟ್ಟದಲ್ಲಿ ಜ್ಞಾನಧಾರೆಯ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಅದು ಹಳ್ಳಿ ಹಳ್ಳಿಗೆ ತಲುಪಬೇಕು. ವಿದ್ಯಾರ್ಥಿಗಳು ನಿತ್ಯ ಒಂದು ಕನ್ನಡ ಒಂದು ಇಂಗ್ಲಿಷ್‌ ಪತ್ರಿಕೆಯನ್ನು ಓದಬೇಕು. ದಿನಕ್ಕೆ ಒಂದು ಗಂಟೆ ಸಾಹಿತ್ಯ ಮತ್ತು ಸಾಹಿತ್ಯೇತರ ಕೃತಿಗಳನ್ನು ಓದಲು ಸಮಯ ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

‘ಪೈಲೆಟ್ ಪೆನ್‌’ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಕುಮಾರ್‌ ಆರ್‌. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈ.ಲಿ.ನ ಸಿಒಒ ಕಿರಣ್‌ ಸುಂದರರಾಜನ್‌ ಎಚ್‌ಆರ್‌ ರಾಜೀವ್‌ ವೇಲೂರು ಭಾಗವಹಿಸಿದ್ದರು.

ಚಾಂಪಿಯನ್‌ ಆಗಿ ಹೊರಹೊಮ್ಮಿದ ಆರ್ಮಿ ಪಬ್ಲಿಕ್‌ ಸ್ಕೂಲ್‌ನ ನಿಯಾತಿ ಮತ್ತು ರಿದಂ ಅವರಿಗೆ ‘ಪೈಲೆಟ್ ಪೆನ್‌’ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಗಣೇಶ್‌ ಹೆಗಡೆ ಮತ್ತು ಟಿಪಿಎಂಎಲ್‌ ಬ್ಯುಸಿನೆಸ್‌ ಆ್ಯಂಡ್ ಆಪರೇಶನ್‌ ನ್ಯಾಷನಲ್ ಹೆಡ್‌ ಆನಂದ್‌ ಬಿಲ್ದಿಹರ್‌ ಮತ್ತು ಕ್ವಿಜ್ ಮಾಸ್ಟರ್‌ ಮೇಘವಿ ಮಂಜುನಾಥ ಬಹುಮಾನ ವಿತರಿಸಿ ಶುಭ ಕೋರಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.