ADVERTISEMENT

ಹೋಟೆಲ್ ಊಟ, ತಿಂಡಿ ದರ ಶೀಘ್ರವೇ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 21:45 IST
Last Updated 4 ನವೆಂಬರ್ 2021, 21:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಇಂಧನ, ಅಡುಗೆ ಅನಿಲ, ದಿನಸಿ ಪದಾರ್ಥಗಳ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಊಟ, ತಿಂಡಿ ತಿನಿಸುಗಳ ದರ ಏರಿಕೆಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಸಿದ್ಧತೆ ನಡೆಸಿದ್ದಾರೆ.

‘ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಅಡುಗೆ ಅನಿಲದ ಸಿಲಿಂಡರ್ ದರ ₹2 ಸಾವಿರ ದಾಟಿದೆ. ಗೃಹ ಬಳಕೆ ಅಡುಗೆ ಅನಿಲಕ್ಕೆ ಜಿಎಸ್‌ಟಿ ದರ ಶೇ 5ರಷ್ಟಿದ್ದರೆ, ವಾಣಿಜ್ಯ ಬಳಕೆ ಅಡುಗೆ ಅನಿಲಕ್ಕೆ ಶೇ 18ರಷ್ಟು ಜಿಎಸ್‌ಟಿ ದರ ನಿಗದಿ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆ ಲಾಕ್‌ಡೌನ್‌ಗೂ ಮುನ್ನ 15 ಕೆ.ಜಿ ಡಬ್ಬಕ್ಕೆ ₹1,350 ಇತ್ತು. ಈಗ ಅದು ₹2,500 ತನಕ ಏರಿಕೆಯಾಗಿದೆ. ಸರಾಸರಿ ಶೇ 60ರಿಂದ ಶೇ 70ರಷ್ಟು ದರ ಏರಿಕೆಯಾಗಿದೆ. ಬೇಳೆಕಾಳುಗಳು ಮತ್ತು ತರಕಾರಿ ದರಗಳೂ ಲಂಗುಲಗಾಮಿಲ್ಲದೇ ಏರಿಕೆಯಾಗುತ್ತಿದೆ. ಹಾಗಾಗಿ ಊಟ, ತಿಂಡಿ ತಿನಿಸುಗಳ ದರ ಏರಿಕೆ ಅನಿವಾರ್ಯ’ ಎನ್ನುತ್ತಾರೆ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್.

‘ಅಡುಗೆ ಎಣ್ಣೆ ದರ ಹೆಚ್ಚಾಗಿದೆ ಎಂಬ ಕಾರಣಕ್ಕೆ ಒಂದು ಪ್ಲೇಟ್ ಬಜ್ಜಿ ದರವನ್ನು ₹40ಕ್ಕೆ ಏರಿಕೆ ಮಾಡಿದರೆ ಜನ ಒಪ್ಪುವುದಿಲ್ಲ. ಬೆಂಗಳೂರಿನಲ್ಲಿ ₹20 ರೂಪಾಯಿ ಒಳಗೆ ಊಟ ತಿಂಡಿ ನೀಡುವ ಹೋಟೆಲ್‌ಗಳಿಂದ ₹2 ಸಾವಿರ ತನಕ ಊಟದ ದರ ಇರುವ ಹೋಟೆಲ್‌ಗಳಿವೆ. ದರ ಏರಿಕೆ ಎಷ್ಟಿರಬೇಕು ಎಂಬುದನ್ನು ಸಂಘ ನಿರ್ಧರಿಸುವುದಿಲ್ಲ. ಸಾಮರ್ಥ್ಯಕ್ಕೆ ತಕ್ಕಂತೆ ದರ ಏರಿಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಸದಸ್ಯರಿಗೆ ಬಿಟ್ಟಿದ್ದೇವೆ’ ಎಂದರು.

ADVERTISEMENT

‘ದರ ಏರಿಕೆ ಮಾಡದಿದ್ದರೆ ಮಾಲೀಕರು ಸಾಲ ಮಾಡಿಕೊಂಡು ಹೋಟೆಲ್‌ಗಳನ್ನು ಮುಚ್ಚಬೇಕಾದ ಸ್ಥಿತಿಗೆ ತಲುಪಬೇಕಾಗುತ್ತದೆ. ಬಹುತೇಕ ಶೇ 10ರಷ್ಟು ದರ ಏರಿಕೆ ಆಗಲಿದೆ. ಡಿಸೆಂಬರ್‌ನಲ್ಲಿ ಹೆಚ್ಚಳವಾಗಲಿದೆ’ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದರು.

ಡೀಸೆಲ್ ದರ ಕಡಿಮೆ ಆಗಿರುವುದರಿಂದ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಏರಿಕೆ ಪ್ರಮಾಣ ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಆದರೂ, ದರ ಏರಿಕೆ ಅನಿವಾರ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.