ADVERTISEMENT

ನಮಗೆ ಒಗ್ಗದ ಸಂಸ್ಕೃತಿಯ ಪರಿಚಯ, ಪ್ರವೃತ್ತಿ ನಿಲ್ಲಿಸಿ: ರೋಹಿತ್ ಚಕ್ರತೀರ್ಥ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 16:01 IST
Last Updated 3 ಅಕ್ಟೋಬರ್ 2021, 16:01 IST
‘ಬೈ2 ಕಾಫಿ ಮತ್ತು ಮಾಗಡಿ ಡೇಸ್’ ನಾಟಕ ಕೃತಿ ಬಿಡುಗಡೆ ಸಮಾರಂಭ
‘ಬೈ2 ಕಾಫಿ ಮತ್ತು ಮಾಗಡಿ ಡೇಸ್’ ನಾಟಕ ಕೃತಿ ಬಿಡುಗಡೆ ಸಮಾರಂಭ   

ಬೆಂಗಳೂರು: ‘ನಮಗೆ ಸಲ್ಲದ ಮತ್ತು ಒಗ್ಗದ ಜಗತ್ತನ್ನು ಮಕ್ಕಳಿಗೆ ತೋರಿಸಿ ಅದನ್ನೇ ಬದುಕಿನುದ್ದಕ್ಕೂ ಅನುಕರಿಸುವ ಚಾಳಿಯನ್ನು ಇನ್ನಾದರೂ ನಿಲ್ಲಿಸಿ; ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯ ಮತ್ತು ಭಾಷೆಗಳ ಉಳಿವಿಗೆ ಮುಂದಾಗುವ ಅವಶ್ಯಕತೆ ಇಂದು ತುರ್ತಾಗಿ ಆಗಬೇಕಿದೆ’ ಎಂದು ಸಾಮಾಜಿಕ ಚಿಂತಕ ರೋಹಿತ್ ಚಕ್ರತೀರ್ಥ ಪ್ರತಿಪಾದಿಸಿದರು.

ಲೇಖಕ ಅಭಿಷೇಕ್ ಅಯ್ಯಂಗಾರ್ ಅವರ, ‘ಬೈ2 ಕಾಫಿ ಮತ್ತು ಮಾಗಡಿ ಡೇಸ್’ ನಾಟಕ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರಂಗಶಿಕ್ಷಣ ಪ್ರಧಾನವಾಗಿ ಅಡಕವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದರು.

‘ಯಯಾತಿಯನ್ನು ಲಂಪಟ ಎಂದು ನಾಟಕಗಳಲ್ಲಿ ಚಿತ್ರಿಸುವ ಬುದ್ಧಿಜೀವಿಗಳಿಂದಾಗಿ ನಾವು ಯಯಾತಿಯ ಅತ್ಯುತ್ತಮ ದಾರ್ಶನಿಕ ಗುಣಗಳನ್ನು ಕಡೆಗಣಿಸಿ ನೋಡುವಂತಾಗಿದೆ’ ಎಂದು ವ್ಯಥೆ ವ್ಯಕ್ತಪಡಿಸಿದರು.

ADVERTISEMENT

‘ನಾಟಕಗಳು ನಮಗೆ ತನ್ಮಯತೆ ಮತ್ತು ಆಲಿಸುವಿಕೆಯನ್ನು ಕಲಿಸುವ ಮೂಲಕ‌ ಸಮಾಜವನ್ನೂ ನಿರುಕಿಸಲು ಉತ್ತೇಜಿಸುತ್ತವೆ ಎಂಬ ಅಂಶಗಳನ್ನು ನಾವು ಮಕ್ಕಳ ಮನೋಕೋಶಕ್ಕೆ ತಲುಪಿಸಲು ಪ್ರಯತ್ನಿಸುವ ಮೂಲಕ ಸ್ವದೇಶಿ ಸಂಪ್ರದಾಯ ಚಿಂತನೆಯ ರಂಗಭೂಮಿಯನ್ನು ಹೆಚ್ಚೆಚ್ಚು ಪರಿಚಯಿಸುತ್ತಾ ಹೋಗಬೇಕು’ ಎಂದರು.

ಹಿರಿಯ ರಂಗಕರ್ಮಿ ಎಸ್.ಎನ್.ಸೇತೂರಾಮ್ ಮಾತನಾಡಿ, ‘ರಾಮನನ್ನು ಬೈಯುತ್ತಾ, ರಾವಣನನ್ನು ವಿಜೃಂಭಿಸುವ ನಾಟಕಗಳನ್ನು ಬರೆದು ಆಡಿಸುವ ಪ್ರವೃತ್ತಿ ಕೊನೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.