
ಬೆಂಗಳೂರು: ‘ನವೋದ್ಯಮದ ಮೂಲಕ ಲಾಭ ಗಳಿಸುವುದು ತಪ್ಪಲ್ಲ. ಜೊತೆಗೆ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕಡೆ ಗಮನ ನೀಡಬೇಕು’ ಎಂದು ಮೇಳ ವಂಚರ್ಸ್ ವ್ಯವಸ್ಥಾಪಕ ಪಾಲುದಾರ ಕೃಷ್ಣಕುಮಾರ್ ನಟರಾಜನ್ ಹೇಳಿದರು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ರಾಮಯ್ಯ ಎವಲ್ಯೂಟ್ ಸ್ಟಾರ್ಟ್ ಅಫ್ ಅವಾರ್ಡ್– 2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನವೋದ್ಯಮ ಎಂದಾಕ್ಷಣ ಅದು ತಕ್ಷಣಕ್ಕೆ ದುಡ್ಡು ಮಾಡಬೇಕು ಎಂದುಕೊಳ್ಳುವುದು ತಪ್ಪು. ಮೊದಲು ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಇದರಲ್ಲಿ ಯಶಸ್ಸು ಕಂಡರೆ, ಎಲ್ಲ ಗ್ರಾಹಕರು ನಿಮ್ಮ ಕಂಪನಿಯ ಕಡೆ ಮುಖ ಮಾಡುತ್ತಾರೆ ಎಂಬುದು ತಿಳಿದುಕೊಳ್ಳಿ’ ಎಂದು ಸಲಹೆ ನೀಡಿದರು.
ಇಟಲಿ ದೇಶದ ರಾಯಭಾರಿ ಗಿಯಾಂಡೊಮೆನಿಕೊ ಮಿಲ್ನೊ ಮಾತನಾಡಿ, ‘ಬೆಂಗಳೂರು ಸ್ಟಾರ್ಟ್‌ಅಪ್ ಕಂಪನಿಗಳ ತವರು ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಹಲವು ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಮಾರುಕಟ್ಟೆ ಬಹಳ ವಿಸ್ತಾರವಾಗಿದೆ’ ಎಂದು ತಿಳಿಸಿದರು.
ರಾಮಯ್ಯ ಎವಲ್ಯೂಟ್ ಸಹ ಸಂಸ್ಥಾಪಕ ಸಮರ್ಥ ನಾಗಭೂಷಣ್ ಮಾತನಾಡಿ, ‘ನಾವು ಈ ಎವಲ್ಯೂಟ್ ಅನ್ನು 2021ರಿಂದ ನಡೆಸಿಕೊಂಡು ಬರುತ್ತಿದ್ದೇವೆ. ಜಾಗತಿಕ ಮಟ್ಟಕ್ಕಿಂತ ಭಾರತ ಅಭಿವೃದ್ಧಿ ಕಾಣುವಂತಹ ಯೋಜನೆಗಳಿಗೆ ಹೆಚ್ಚಿನ ಆರ್ಥಿಕ ಸಹಾಯ ಮಾಡಿದ್ದೇವೆ. 22 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. ಅಂದಾಜು ₹ 2 ಕೋಟಿ ಅನುದಾನ ನೀಡುತ್ತಿದ್ದೇವೆ’ ಎಂದರು.
ಗೋಕುಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಸೀತಾರಾಮ್, ಗೌರವ ಕಾರ್ಯದರ್ಶಿ ಎಂ. ಆರ್. ಆನಂದ ರಾಮ್, ಉಪಾಧ್ಯಕ್ಷ ಎಂ. ಆರ್. ಜಾನಕಿರಾಮ್, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾದ ಎಂ. ಆರ್. ಸಂಪಂಗಿ ರಾಮಯ್ಯ, ಎಂ. ಆರ್. ಕೋದಂಡ ರಾಮ್, ಆರ್‌ಐಟಿ ಪ್ರಾಂಶುಪಾಲ ಎನ್.ವಿ.ಆರ್. ನಾಯ್ಡು, ಕಾರ್ಯಕಾರಿ ನಿರ್ದೇಶಕ ಎಚ್.ವಿ. ಪಾರ್ಶ್ವನಾಥ, ಶೈಕ್ಷಣಿಕ ಸಲಹೆಗಾರ ಕರಿಸಿದ್ದಪ್ಪ, ರಾಮಯ್ಯ ಎವಲ್ಯೂಟ್ ಸಿಇಒ ಎಂ. ಟಿ. ಅರವಿಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.