ADVERTISEMENT

ಸೋಂಪುರ: ಪಂಚಾಯಿತಿ ಮುಂದೆ ಕಸ ಸುರಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 22:36 IST
Last Updated 19 ನವೆಂಬರ್ 2025, 22:36 IST
ಸೋಂಪುರ ಪಂಚಾಯಿತಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು.
ಸೋಂಪುರ ಪಂಚಾಯಿತಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು.   

ದಾಬಸ್ ಪೇಟೆ: ಇಲ್ಲಿನ ಸೋಂಪುರ ಗ್ರಾಮ ಪಂಚಾಯಿತಿಯ ಮುಂದೆ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಕಸವನ್ನು ಸುರಿದು ಪ್ರತಿಭಟನೆ ಮಾಡಿದ್ದಾರೆ.

ಬುಧವಾರ ಗ್ರಾಮಸ್ಥರೊಬ್ಬರು ಮೃತಪಟ್ಟಿದ್ದರಿಂದ ಅಂತ್ಯಕ್ರಿಯೆ ಮಾಡಲು ಊರಿನವರು ಸ್ಮಶಾನಕ್ಕೆ ಹೋಗಿ ನೋಡಿದರೆ, ಅಲ್ಲಿ ಬರೀ ತ್ಯಾಜ್ಯ ತುಂಬಿತ್ತು. ಇದರಿಂದ ಕಂಗಾಲಾದ ಗ್ರಾಮಸ್ಥರು ಕಸವನ್ನು ತುಂಬಿಕೊಂಡು ಬಂದು ಪಂಚಾಯತಿ ಕಛೇರಿ ಮುಂದೆ ಸುರಿದು ಪ್ರತಿಭಟನೆ ಮಾಡಿದರು.

ಸ್ಮಶಾನಕ್ಕಾಗಿ ಗ್ರಾಮಕ್ಕೆ ಕಂದಾಯ ಇಲಾಖೆ ಎರಡು ಎಕರೆ ಜಮೀನನ್ನು ನೀಡಿತ್ತು. ಇದಕ್ಕೆ ಸೋಂಪುರ ಗ್ರಾಮ ಪಂಚಾಯಿತಿ ಕಾಂಪೌಂಡ್ ಹಾಕದೆ ಹಾಗೆಯೇ ಬಿಟ್ಟಿದ್ದರು. ಇಲ್ಲಿ ದಿನ ನಿತ್ಯ ಕಸ ತಂದು ಸುರಿಯುತ್ತಿರುವುದರಿಂದ ಸ್ಮಶಾನ ಮುಚ್ಚುವ ಪರಿಸ್ಥಿತಿಗೆ ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ADVERTISEMENT

ಗ್ರಾಮಸ್ಥ ಮಹದೇವಯ್ಯ ಮಾತನಾಡಿ, ‘ಗ್ರಾಮದಲ್ಲಿ ಸಾಕಷ್ಟು ಜಮೀನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿದೆ.  ಸ್ಮಶಾನಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ಎರಡು ಎಕರೆ ಜಾಗ ಪಡೆದುಕೊಳ್ಳಲಾಗಿದೆ. ಈ ಜಾಗವನ್ನು ಪಂಚಾಯಿತಿಯವರು ಅಭಿವೃದ್ಧಿ ಮಾಡಬೇಕಿತ್ತು. ಆದರೆ ಸೋಂಪುರ ಗ್ರಾಮ ಪಂಚಾಯತಿ ಆಡಳಿತ ನಿರ್ಲಕ್ಷ್ಯವಹಿಸಿದೆ’ ಎಂದು ಆರೋಪಿಸಿದರು.

ಪಂಚಾಯಿತಿ ಅಧ್ಯಕ್ಷರಾ‌ದ ಇಂದ್ರಮ್ಮ ಪ್ರತಿಕ್ರಿಯಿಸಿ, ಮುಂದೆ ಈ ರೀತಿ ಗಮನಹರಿಸಿ ಸ್ಮಶಾನದ ಅಭಿವೃದ್ಧಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಚಿತ್ರ: ಸೋಂಪುರ ಪಂಚಾಯಿತಿ ಕಚೇರಿ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.